Sri Kote Mariyamma

ಶ್ರೀ ಕೋಟೆ ಮಾರಿಯಮ್ಮ ದೇವಾಲಯ:

                      ಆಕೆ ಲಕ್ಷ್ಮಿಯೂ ಹೌದು, ಸರಸ್ವತಿ ಮತ್ತು ಪಾರ್ವತಿಯು ಹೌದು ಹಾಗೆಯೇ ದುರ್ಗಿಯು ಅವಳೇ ಎಂದು ಹಿರಿಯರೊಬ್ಬರು “ಶ್ರೀ ಕೋಟೆ ಮಾರಿಯಮ್ಮ” ದೇವಿಯ ಗುಣಗಾನವನ್ನು ಶುರುವಿಟ್ಟುಕೊಳ್ಳುತ್ತಾರೆ. ಈಕೆಯ ನೆಲೆ ನಗರದ ಕೊಹಿನೂರ್ ರಸ್ತೆಯ ಬಳಿ. ಈ ದೇವಿಯದು ಭವ್ಯ ಇತಿಹಾಸ. ಸುಮಾಉ ಎರಡು ಶತಮಾನಗಳ ಹಿಂದಿನ ಮಾತು. ಅಂದು ಕೊಡಗನ್ನು ಆಳುತ್ತಿದ್ದ ರಾಜನು ತನ್ನ ಆಡಳಿತವನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ವಿವಿಧೆಡೆಗಳಿಂದ ನಾಲ್ಕು ಶಕ್ತಿ ದೇವತೆಗಳನ್ನು ಕರೆತಂದು ನೆಲೆಗೊಳಿಸಿದ ಇವುಗಳೇ ಇಂದಿನ ಕರಗ ದೇವತೆಗಳು ರಾಜನು ತನ್ನ ಆಡಳಿತ ವಿಚಾರಗಳನ್ನು ಈ ದೇವತೆಗಳಲ್ಲಿ ಸಮಾಲೋಚಿಸಿ ಮುನ್ನಡೆಯುತ್ತಿದ್ದ ಇವುಗಳಲ್ಲಿ ದಿಂಡಿಗಲ್ ಮೂಲದ ಕೋಟೆ ಮಾರಿಯಮ್ಮ ತಾಯಿ ರಾಜನ ಆಸ್ಥಾನ ದೇವತೆಯಾಗಿ ರಾರಾಜಿಸಿದಳು. ಕ್ರಮೇಣ ರಾಜನ ದುರಾಡಳಿತ- ಅನಾಚಾರಗಳು ಎಲ್ಲೆ ಮೀರಿದಾಗ ತಾಯಿ ಆತನಿಗೆ ಚೀಮಾರಿ ಹಾಕಿದಳು. ಕೋಪಗೊಂಡ ರಾಜನು ದೇವಿಯ ವಿಗ್ರಹವನ್ನು ಭಗ್ನಗೊಳಿಸಿ ಕೋಟೆ ಹಿಂಬದಿಯ ಬಾವಿಯೊಂದರಲ್ಲಿ ಎಸೆದನು.

               ಕೆಲಸಮಯದ ನಂತರ ಶ್ರೀ ಕೋಟೆ ಮಾರಿಯಮ್ಮ ತಾಯಿಯು “ಮುತ್ತು-ಮುತ್ತು” ಎಂಬ ದಂಪತಿಗಳ ಕನಸಿನಲ್ಲಿ ಕಾಣಿಸಿಕೊಂಡು ತನ್ನ ವಿಗ್ರಹವು ಬಾವಿಯಲ್ಲಿ ಇರುವುದಾಗಿಯೂ ಅದನ್ನು ಹೊರತಗೆದು ಪೂಜಿಸಬೇಕೆಂದು ತಿಳಿಸಿದಳು. ಆಕೆಯ ಮಾತನ್ನು ಪಾಲಿಸಿದ ಮುತ್ತು-ಮುತ್ತು ದಂಪತಿಗಳು ವಿಗ್ರಹವನ್ನು ಹೊರತೆಗೆದು ಪೂಜಿಸಿ ಬಾವಿಯ ಸಮೀಪದಲ್ಲೇ ಪ್ರತಿಷ್ಠಾಪಿಸಿದರು. ಈ ಸಂದರ್ಭದಲ್ಲೇ ತನ್ನನ್ನು ಕೋಟೆಯಿಂದ ಹೊರಗಟ್ಟಿದ ರಾಜನ ಮೇಲಿನ ಕೋಪದಿಂದ ದೇವಿಯು ‘ನಾನು ಆ ಕೋಟೆಯ ಕಡೆ ತಿರುಗಿಯೂ ನೋಡುವುದಿಲ್ಲ.’ ಎಂದು ಕೋಟೆಗೆ ವಿರುದ್ದ ದಿಕ್ಕಿಗೆ ಅಂದರೆ ಉತ್ತಾರಭಿಮುಖವಾಗಿ ಮುಖಮಾಡಿ ನೆಲೆ ನಿಂತಳು. ತಾಯಿಯ ಮೂಲ ವಿಗ್ರಹ ಮತ್ತು ಬಾವಿಯನ್ನು ಇಂದಿಗೂ ಕಾಣಬಹುದು. ದಶಕಗಳ ಹಿಂದೆ ಕೊಡಗಿ ಜಿಲ್ಲಾಧಿಕಾರಿಯೊಬ್ಬರು ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಮಡಿಕೇರಿ ದಸರವನ್ನು ಕೋಟೆಗೆ ವರ್ಗಾಯಿಸಬೇಕೆಂದು ಆದೇಶ ಹೊರಡಿಸಿತ್ತಲ್ಲದೇ ಎಲ್ಲಾಸಿದ್ದತೆಗಳನ್ನು ನಡೆಸಿದ್ದರು. ಆದರೆ ‘ಕೋಟೆಗೆ ಮಾತ್ರ ಹಿಂತಿರುಗುವುದಿಲ್ಲ’ ಎಂಬ ದೇವಿಯ ಹಠದಿಂದಾಗಿ ಉತ್ಸವ ಕೋಟೆಯಲ್ಲಿ ನಡೆಯಲೇ ಇಲ್ಲವಂತೆ.

               ದೇವಿಯ ಗುಡಿಯು ಕಾಲಕ್ರಮೇಣ ದೇವಾಲಯ ಆಡಳಿತ ಮಂಡಳಿಯ ಕಾಳಜಿಯಿಂದ ಪ್ರಗತಿ ಹೊಂದುತ್ತಾಸಾಗಿದೆ. ಪ್ರಸ್ತುತ ಗೋಪುರ, ಕಳಶಗಳನ್ನು ಹೊಂದಿರುವ ಸುಂದರ ದೇಗುಲದ ಇನ್ನಷ್ಟು ಕಾರ್ಯಗಳು ಬಾಕಿ ಇದೆ. ದೇಗುಲದ ಒಳಭಾಗದಲ್ಲಿರುವ ಉದ್ವವಲಿಂಗ ಮತ್ತು ಹುತ್ತ ದೇಗುಲಕ್ಕೆ ವಿಶಿಷ್ಟ ಮೆರುಗನ್ನು ನೀಡಿದೆ. ಇಲ್ಲಿ ಬಲಿ ಪೀಠವು ಇದೆ.

                ವಾರ್ಷಿಕವಾಗಿ ಎಲ್ಲಾ ಹಬ್ಬ-ಹರಿದಿನಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಾರಕೊಮ್ಮೆ ವಿಶೇಷ ಪೂಜೆ ಮತ್ತು ಭಜನೆಗಳು ನಡೆಯುತ್ತವೆ. ನವರಾತ್ರಿಯಂತೂ ಇಲ್ಲಿನ ಪ್ರಮುಖ ಆಚರಣೆ. ಕೋಟೆ ಮಾರಿಯಮ್ಮ ದೇವಿಯ ಬಿಂಬವನ್ನು ಹೊತ್ತ ಕರಗವನ್ನು ಈ ಸಂದರ್ಭದಲ್ಲಿ ಹೊರಡಿಸಿ ನಗರ ಪ್ರದಕ್ಷಿಣೆ ಮಾಡಲಾಗುವುದು. ದೇಗುಲದ ಪೂಜಾಕಾರ್ಯಗಳನ್ನು ಗೌಳಿ ಜನಾಂಗದವರೇ ನೆರವೇರಿಸುತ್ತಾರೆ. ಕರಗಕ್ಕೆ ಹರಕೆ ಹೊತ್ತುಕೊಳ್ಳುವ ಎಲ್ಲಾ ಮತ-ಧರ್ಮದವರು ತಮ್ಮ ಹರಕೆಗಳನ್ನು ನವರಾತ್ರಿ ಸಂದರ್ಭದಲ್ಲಿ ಒಪ್ಪಿಸುತ್ತಾರೆ. ವಿಜಯದಶಮಿಯ ನಂತರ ಮೂರನೇ ದಿನ ಕುಂಭ ಪೂಜೆ ನೆರವೇರಿಸುತ್ತಾರೆ. 


ad4
ad1
ad2
ad3
ad4
ad5
ad6
ad7
ad8
ad9
ad10
ad11
ad12
ad13

Related Information