Bhramha Giri

ಅಗಸ್ತ್ಯಾಶ್ರಮದಿಂದ ಕುಬೇರಾಶ್ರಮದೆಡೆಗೆ:  ಬ್ರಹ್ಮಗಿರಿಯ ಹಿನ್ನೆಲೆ:-

                         ಸಪ್ತದ್ವೀಪಗಳಲ್ಲಿ ಒಂದಾದ ಜಂಬೂದ್ವೀಪದ ದಕ್ಷಿಣ ಭಾಗದಲ್ಲಿ ಪುರಾಣ ಕಾಲದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಕ್ರೋಢ ದೇಶವೆಂಬ ಹೆಸರಿನ ಪ್ರಾಂತ್ಯವೊಂದಿತ್ತು. ಅದಕ್ಕೆ ಆ ಹೆಸರು ಬರಲು ಪೌರಾಣಿಕವಾಗಿ ಒಂದು ಕತೆಯಿದೆ. ಹಿಂದೆ ಮಹಾವಿಷ್ಣುವು ದಶಾವತಾರಗಳನ್ನು ನಾನಾ ಉದ್ದೇಶಗಳಿಗಾಗಿ ಎತ್ತಿದನು. ಮೊದಲನೆಯದಾಗಿ ಮತ್ಸ್ಯಾವತಾರ. ಎರಡನೆಯದಾಗಿ ಕೂರ್ಮಾವತಾರ. ಮೂರನೆಯದಾಗಿ ವರಹಾವತಾರವನ್ನು ತಳೆದನು. ಇದರಲ್ಲಿ ಈ ವರಾಹವು ಮಹಾಕ್ರೋಢನಾಗಿ ಬೆಳೆದು ಈ ಭೂ ಖಂಡದ ಪ್ರಜೆಗಳಿಗೆ ನಾನಾ ರೀತಿಯಲ್ಲಿ ಕೇಡುಂಟು ಮಾಡುತ್ತಿದ್ದನು. ರಾಕ್ಷಸ ಸಂಹಾರಕ್ಕಾಗಿ ವತರಿಸಿದ ಮಹಾ ಸೂಕರವು ಜನರಿಗಿ ತೊಂದರೆಯುಂಟು ಮಾಡುತ್ತಿರಲು ಜನರಯ ದೇವತೆಗಳಿಗೆ ಮೊರೆಯಿಟ್ಟರು. ದೇವತೆಗಳೆಲ್ಲಾ ಸೇರಿ ಮಹಾದೇವನಾದ ಶಂಕರನ ಸ್ತುತಿ ಮಾಡಲು ಶುರು ಮಾಡಿದರು.

                          ಜಗದೊಡೆಯ ಶಂಕರನು ಪ್ರತ್ಯಕ್ಷನಾಗಿ ದೇವ ಮಾನವರ ತೊಂದರೆಗಳನ್ನೆಲ್ಲಾ ಮನಗಂಡು ಆ ಮಹಾಕ್ರೋಢನನ್ನು ಕೊಲ್ಲುವೆನೆಂದು ಅಭಯ ನೀಡಿದನು. ಅಂತೆಯೇ ಒಂದು ದಿನ ಶಿವನು ಕಿರಾತವೇಷ ಧರಿಸಿ, ಬಿಲ್ಲು ಬಾಣಗಳನ್ನು ಕೈಗೊಂಡು ಬೇಟೆಗೆ ಸನ್ನದ್ಧನಾಗಿ ಬಂದನು. ಅದರಂತೆ ಕಿರಾತ ವೇಷಧಾರಿಯಾದ ಶಿವನಿಗೆ ಜಂಬೂದ್ವೀಪದ ಜನರು ಬೇಟೆಯಾಡಲು ಸಹರಿಸಿದರು. ಎಲ್ಲರೂ ತಮ್ಮ ತಮ್ಮ ಆಯುಧಗಳು ನಾಯಿಗಳೊಂದಿಗೆ ವಿವಿಧ ಬಗೆಯ ಕರ್ಕಶ ಶಬ್ದಗಳನ್ನುಂಟು ಮಾಡುವ ಡೋಲು ತಮ್ಮಟೆಗಳೊಂದಿಗೆ ಮಾಡುವ ಡೋಲು ತಮ್ಮಟೆಗಳೊಂದಿಗೆ ದ್ವೀಪದ ಉತ್ತರ ಭಾಗದಿಂದ ಬೇಟೆಯಾಡಲು ಶುರು ಮಾಡಿದರು. ಕ್ರೋಢ ಸಂತತಿಯ ಅಸಂಖ್ಯಾತ ಸೂಕರ ವರ್ಗಕ್ಕೆ ಸೇರಿದ ಪ್ರಾಣಿಗಳನ್ನು ವಧಿಸುತ್ತಾ ಶಿವನೂ ಕಿರಾತ ಜನರೂ ಮುಂದುವರಿಯುತ್ತಿದ್ದರು. ಉತ್ತರ ಭಾಗದಿಂದ ಶಿವನಿಂದಲೂ ಕಿರಾತ ಜನರಿಂದಲೂ ತಪ್ಪಿಸಿಕೊಂಡ ವಿಷ್ಣುವಿನ ಅಂಶದ ಮಹಾಕ್ರೋಢನು ದಕ್ಷಿಣದ ಭಾಗಕ್ಕೆ ಬಂದನು.

                          ಅತಿ ಹುಮ್ಮಸ್ಸಿನಿಂದ ಕೂಡಿದ ಕಿರಾತ ವರ್ಗದ ಜನರ ಸಹಾಯದಿಂದ ಶಿವನು ಕ್ರೋಢನನ್ನು (ಹಂದಿಯನ್ನು) ಕೊಂದುಹಾಕಿದ ಪ್ರಾಂತ್ಯವು ಸಹ್ಯಾದ್ರಿ ಶಿಖರ ಶ್ರೇಣಿಯಲ್ಲಿ ಕ್ರೋಢ ದೇಶವೆಂದು ಕರೆಯಲ್ಪಟ್ಟಿತು. ಆನರು ಶಿವನ ಹೆಸರಿನಲ್ಲಿ ಸತ್ತ ವರಹವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು. ಕ್ರಮೇಣ ಆ ಪ್ರದೇಶವು ಕ್ರೋಢ ದೇಶವೆಂದೂ ನಂತರ ಕೊಡಗು ದೇಶವೆಂದೂ ಇಲ್ಲಿನ ಜನರು ಕ್ರೋಢರು ಎಂಬ ಅಭಿದಾನವನ್ನು ಹೋಂದಿ ಮುಂದೆ ಕೊಡಗರೆಂದೂ ಕರೆಯಲ್ಪಟ್ಟರು. ವರಾಹನ ಅವತಾರ ಸಮಾಪ್ತಿಯಾದ ದಿನವನ್ನು ಇಂದಿಗೂ ಕೈಲುಪೊಳ್ದು ಎಂದು ಆಚರಿಸುತ್ತಿದ್ದಾರೆ. 

                          ಆಗಿನ್ನೂ ಜಾತಿ ಪದ್ದತಿ ವ್ಯವಸ್ಥೆ ಮೂಡಿರಲಿಲ್ಲ. ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರರೆಂದು ಮಾತ್ರ ಇತರ ಎಡೆಗಳಲ್ಲಿ ಗುರುತಿಸಲ್ಪಟ್ಟಂತೆ ಸಹ್ಯಾದ್ರಿಯ ಕ್ರೋಢ ದೇಶದಲ್ಲಿಯೂ ವರ್ಗೀಕರಣ ಮಾಡಲಾಗಿತ್ತು. ಕ್ರಮೇಣ ವೃತ್ತಿಯನ್ನು ಆಧರಿಸಿ ಇಲ್ಲಿ ಕೂಡಾ ಒಂದೇ ಭಾಷೆ ಸಂಸ್ಕøತಿಯನ್ನು ಆಚರಿಸುತ್ತದ್ದರೂ ಕೂಡಾ ವರ್ಗೀಕರಣ ಉಂಟಾಗಿ ಕ್ಷಾತ್ರತೆ ಪ್ರದರ್ಶಿಸುತ್ತಿರುವ ಜನರು, ಶೂದ್ರರು, ವ್ಯಾಪಾರಿ ವರ್ಗದವರು, ಬ್ರಾಹ್ಮಣರು ಇವರೆಲ್ಲಾ ಸಮಾಜದಲ್ಲಿ ಹುಟ್ಟಿಕೊಂಡರು.

                       ಇದೆಲ್ಲದಕ್ಕೂ ಹಿಂದೆ ಈ ಪ್ರದೇಶಕ್ಕೆ ಬ್ರಹ್ಮ ದೇಶವೆಂಬ ಹೆಸರಿದ್ದಿತು. ಇದಕ್ಕೆ ಕಾರಣವೆಂದರೆ ಬ್ರಹ್ಮನು ವಿಷ್ಣುವನ್ನು ಕುರಿತು ಇಲ್ಲಿನ ಸಹ್ಯ ಪರ್ವತದ ಉನ್ನತ ಗಿರಿಯಲ್ಲಿ ತಪಸ್ಸು ಮಾಡಲಾರಂಭಿಸಿದನು. ವಿಷ್ಣುವು ಒಲಿಯುವ ಸೂಚನೆಯು ಕಾಣದಾಯಿತು. ಒಂದು ನೆಲ್ಲಿ ಗಿಡವನ್ನು ಬ್ರಹ್ಮಗಿರಿಯ ತುತ್ತತುದಿಯಲ್ಲಿ ನೆಟ್ಟು ಅದನ್ನು ಪೂಜಿಸಿದನು. ಆಗ ವಿಷ್ಣುವು ನೆಲ್ಲಿ ಗಿಡದ ಮೂರೂ ಕೊಂಬೆಗಳಲಲಿ ಬ್ರಹ್ಮ ವಿಷ್ಣು ಶಿವ ಎಂಬ ಮೂರೂ ರೂಪಗಳಲ್ಲಿ ಕಾಣಿಸಿಕೊಂಡು, ತಕ್ಷಣವೇ ಬ್ರಹ್ಮ ಮತ್ತು ಶಿವನ ರೂಪು ಮಾಯವಾಗಿ ಶಂಖ, ಚಕ್ರ, ಗದಾ-ಧಾರಿ, ಪದ್ಮಹಸ್ತನಾದ ಮಹಾವಿಷ್ಣುವು ಗೋಚರಿಸಿಕೊಂಡರು. ಸರ್ವದೇವ ನಮಸ್ಕಾರಮ್ ಕೇಶವ ಪ್ರತಿಗಚ್ಛತಿ ಎಂಬಂತೆ ತ್ರಿಮೂರ್ತಿಗಳಲ್ಲಿ ಭೇದವನ್ನು ಕಲ್ಪಿಸಲಾಗಿದೆಂಬ ಪಾರಮಾರ್ಥಿಕ ಸತ್ಯವನ್ನು ಬ್ರಹ್ಮನಿಗೆ ತೋರಿಸಿ ಕೊಟ್ಟನು.

                           ಹೀಗೆ ಬ್ರಹ್ಮನು ತಪಸ್ಸು ಮಾಡಿದ ಗಿರಿಯು ಬ್ರಹ್ಮಗಿರಿಯಾಯಿತು. ಮಹಾವಿಷ್ಣುವು ಆಮಲಕ (ನೆಲ್ಲಿಕಾಯಿ) ತರುವಿನಲ್ಲಿ ಬ್ರಹ್ಮನಿಗೆ ದರ್ಶನ ನೀಡುದುದರಿಂದ ಆಮಲಕ ಕ್ಷೇತ್ರವೆಂದೂ ಜನರು ಕರೆದರು. ಬ್ರಹ್ಮನು ತಾನು ನಿರ್ಮಿಸುದ ಆಶ್ರಮದ ನೀರಿನ ಕೊರತೆಯನ್ನು ನೀಗಿಸುವುದಕ್ಕಾಗಿ ಒಂದು ಕುಂಡವನ್ನು ತೋಡಿದ್ದರಿಂದ ಅದು ಬ್ರಹ್ಮಕುಂಡಿಕೆಯಾಯಿತು. ತಪಸ್ಸಂಕಲ್ಪ- ಸಾಧನೆಯ ಸಮಯದಲ್ಲಿ ಆಗಾಗ ಗಿರಿಯಿಂದ ಮೇಲೆ ಮೂರು ಸಣ್ಣ-ಸಣ್ಣ ಗುಂಡಿಗಳನ್ನು ತೋಡಿರುವನು. ಉರಿ ಬೇಸಗೆಯಲ್ಲಿಯೂ ಈಗಲೂ ಅಲ್ಲಿ ಉದ್ಧರಣೆ ಸೌಟು ಮುಳುಗುವಷ್ಟು ನೀರು ಇಂದಿಗೂ ಇದೆ. 

                          ಹಿಂದೆ ಮತ್ಸ್ಯ ದೇಶದ ರಾಜನು ಬ್ರಹ್ಮಗಿರಿಯಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಮಕ್ಕಳಿಲ್ಲವೆಂದು ಬೇಡಿಕೊಳ್ಳಲು ಆತನಿಗೆ ಬ್ರಹ್ಮನು ತನ್ನ ಸಾಕುಮಗಳನ್ನಿತ್ತನೆಂದೂ ಆಕೆಯ ಲೋಪೆಯೆಂಬ ಹೆಸರಿನಿಂದ ಮತ್ಸ್ಯ ರಾಜನಲ್ಲಿ ಬೆಳೆದು ಬಳಿಕ ಆಕೆಯ ವಿವಾಹವು ಬ್ರಾಹ್ಮಣನಾದ ಅಗಸ್ತ್ಯನೆಂಬ ಮುನಿಕುವರ ನೊಡನಾಯ್ತೆಂದೂ ಪುರಾಣಗಳಲ್ಲಿ ಬಂದಿದೆ.

                         ತ್ರೇತೇಯುಗದಲ್ಲಿ ಶ್ರೀರಾಮಚಂದ್ರ ಸೀತಾ ಲಕ್ಷ್ಮಣರು ವನವಾಸ ಕಾಲದಲ್ಲಿ ಅಗಸ್ತ್ಯಾಶ್ರಮವನ್ನು ತಲುಪಿದರೆಂದೂ ಉಲ್ಲೇಖವು ಶ್ರೀ ರಾಮಾಯಣ ಗ್ರಂಥದಿಂದ ತಿಳಿದು ಬರುವುದು. ತ್ರೇತಾಯುಗದಲ್ಲಿ ಸೂರ್ಯವಂಶದ ನಹುಷನೆಂಬ ರಾಜನು ಶತಾಶ್ವಮೇಧಯಾಗ, ಸಹಸ್ರ ಸಂಖ್ಯೆಯಲ್ಲಿ ಕ್ರತು (ಉದ್ದೇಶಿತ ಯಾಗ) ಯಜ್ಞಗಳನ್ನು ನಡೆಸಿ ಇಂದ್ರ ಪದವಿಯನ್ನು ಪಡೆದಿದ್ದನೆಂದೂ ದೇವೇಂದರನನ್ನು ಸಿಂಹಾಸನದಿಂದ ಬಲವಂತವಾಗಿ ಹೊರತಳ್ಳಿ ತಾನೇ ದೇವರಾಜನಾದನೆಂದೂ ಸಹಸ್ತ್ರಾಕ್ಷನಾದ ದೇವೇಂದ್ರನ ಪತ್ನಿ ಶಚೀದೇವಿಯು ನ್ಯಾಯ ರೀತಿಯಲ್ಲಿ ನಹುಷನಿಗೆ ದಕ್ಕಬೇಕಾದವಳೆಂದೂ ಬಗೆದು ಆಕೆಗಾಗಿ ಹುಡುಕಾಟ ಪ್ರಾರಂಭಿಸಿದರು. ಆದರೆ ಆಕೆ ಅದೆಲ್ಲಿಯೋ ಅದೆಷ್ಟು ದಿನಗಳೆಂದು ಅಡಗಿದ್ದಾಳು? ಕೊನೆಗೊಮ್ಮೆ ನಹುಷನ ಕಣ್ಣಿಗೆ ಬಿದ್ದಳು. ಇಂದ್ರಾಣಿಯ ಕೈಹಿಡಿದು “ನೀನು ನನ್ನೊಡನೆ ಬಾ. ಈಗ ನಾನು ಸುರರಾಜ ದೇವೇಂದ್ರ. ನ್ಯಾಯ ರೀತಿಯಲ್ಲಿ ನೀನೆನಗೆ  ಸೇರಬೇಕು. ಇದು ಸುರೇಂದ್ರನ ಆಜ್ಞೆ”. ನಹುಷ ಮೈಮುಟ್ಟಿ ಬಲತ್ಕರಿಸುವಾಗ ಇಂದ್ರಾಣಿಯು ಕುಲ ಪರ್ವತಗಳೆಲ್ಲಾ ಕರಗುವಂತೆ ಕೂಗುವಳು. ಆ ಮಾರ್ಗವಾಗಿ ಬಂದ ಸಪ್ತ ಋಷಿಗಳಲ್ಲಿ ಒಬ್ಬನಾದ ಅಗಸ್ತ್ಯನು ಈ ಕೃತ್ಯವನ್ನು ಕಂಡು ಕ್ರೋಧ ಪರವಶತೆಯಿಂದ ರೇಗಿದವನಾಗಿ- “ನೀನು ಎಷ್ಟೇ ಕ್ರತು, ಹೋಮ, ಯಜ್ಞ, ಅಶ್ವಮೇದಗಳನ್ನು ಮಾಡಿ ಇಂದ್ರ ಪದವಿಯನ್ನು ಪಡೆದು ಇರುವೆಯಾದರು ಕೂಡಾ ಇಂದ್ರ ಪದವಗೆ ತಕ್ಕವನಲ್ಲ. ಕಾಮಾಂಧನಾದ ನಿನಗೆ ಹೆಬ್ಬಾವಿನ ಜನ್ಮ ಉಂಟಾಗಲೀ” ಎಂದು ಹೇಳಿದನು.

                           ಹೀಗೆ ಶಾಪಗ್ರಸ್ತನಾದ ನಹುಷನು ಭಾರಿ ಗಾತ್ರದ ಹೆಬ್ಬಾವಾಗಿ ಹೋದನು. ಆ ಹೆಬ್ಬಾವು ದ್ವಾಪರ ಯುಗಾಂತ್ಯದವರೆಗೂ ವನಾಂತರದಲ್ಲಿ ಜಡವಾಗಿ ಬಿದಿತ್ತು. ಹಾಗೂ ಧರ್ಮರಾಯನು ಅಜಗರನಾದ ನಹುಷನೊಂದಿಗೆ ಸಂಭಾಷಣೆ ನಡೆಸಿದನೆಂದೂ ಮಹಾ ಧರ್ಮಾತ್ಮನಾದ ಯುಧಿಷ್ಠಿರನಲ್ಲಿ ತನ್ನ ಪೂರ್ವ ಜನ್ಮದ ಕತೆ ಮತ್ತು ಅಗಸ್ತ್ಯ ಋಷಿಯಿಂದ ದೊರಕಿದ ಶಾಪವನ್ನೂ ಕೂಡಾ ಹೇಳಿ ಸತ್ಯಸಂಧನೂ, ಧರ್ಮ ನಿಷ್ಟುರನೂ ಆದ ಯುಧಿಷ್ಠಿರನನ್ನು ಕಂಡುದರಿಂದ ತನಗೆ ಮೋಕ್ಷವುಂಟಾಯಿತೆಂದೂ ನಹುಷನು ದೇವಲೋಕದ ದಿವ್ಯ ವಿಮಾನವನ್ನೇರಿ ಸ್ವರ್ಗಕ್ಕೆ ಹೋದ ವಿಚಾರವು ಮಹಾಭಾರತದಲ್ಲಿ ಬರುತ್ತದೆ. ಹೀಗೆ ನಕ್ಷತ್ರ ಲೋಕದಲ್ಲಿ ಅಗಸ್ತ್ಯ ನಕ್ಷತ್ರವೆಂದು ವಿರಾಜಮಾನನಾಗಿರುವವನು ಬೇರೊಬ್ಬ ಅಗಸ್ತ್ಯ. ಅದೂ ಅಲ್ಲದೆ ಕವೇರ ಮುನಿಯ ಸಾಕುಮಗಳು ಲೋಪಮುದ್ರೆಯನ್ನು ಮದುವೆಯಾದ ತಮಿಳನಾಡಿನ ಮುನಿ ಅಗಸ್ತ್ಯನು. ಸಿಡುಬಿನ ಕಲೆಗಳಿಂದ ಕುರೂಪಗೊಂಡ ಮುಖದಿಂದ ಕೂಡಿದ ಕಲ್ಲುಕುಟಿಕ ವೃತ್ತಿಯ ವೆಲ್ಲಾಳ ಜಾತಿಯ ತಮಿಳ ಅಗಸ್ತ್ಯ ಬೇರೆ ಎಂದು ಪುರಾಣ ನಾಮ ಚೂಡಾಮಣಿಯಂತಹ ಗ್ರಂಥಗಳಿಂದ ತಿಳಿದು ಬರುವುದು. ಅದು ಸಮಂಜಸವೂ ಕೂಡಾ. ಒಂದೊಂದು ಪ್ರಸಂಗಗಳಿಗೂ ಯುಗಗಳಿಗೂ ಕಾಲವು ಬಹಳ ವ್ಯತ್ಯಾಸವಾಗಿರುವುದು. ಮೊದಲ ಇಬ್ಬರು ಅಗಸ್ತ್ಯರು ಬ್ರಾಹ್ಮಣ ಗೃಹಸ್ಥರಾದರೆ ಮೂರನೆಯವನು ಯಾರೆಂದು ತಿಳಿದು ಬರುವುದಿಲ್ಲ. ಕೊನೆಯವನು ವೆಲ್ಲಾಳನಿದ್ದು ವೃತ್ತಿಯಲ್ಲಿ ಕಲ್ಲುಕುಟಿಕನೆಂದಾಯಿತು. ನಾಲ್ಕು ಅಡಿಗಳಿಗಿಂತಲೂ ಕಡಿಮೆ ಎತ್ತರವಿರುವವರನ್ನು ಇಂದಿಗೂ ಅಗಸ್ತ್ಯನೆಂದೇ ಕರೆದು ಬ್ರಾಹ್ಮಣರು ಲೇವಡಿ ಮಾಡುತ್ತಿರುವರು.

                           ಹೀಗೆ ಕಾಲಾಂತರದಲ್ಲಿ ಕ್ರೋಢ ದೇಶ (ಬ್ರಹ್ಮ ದೇಶ) ವನ್ನು ಮತ್ಸ್ಯ ದೇಶದ ರಾಜಕುಮಾರನು ಆಳಿದುದರಿಂದ ಮತ್ಸ್ಯದೇಶವೆಂಬ ಹೆಸರು ಬಳಕೆಗೆ ಬಂತು. ಆ ಮತ್ಸ್ಯ ದೇಶದ ವ್ಯಾಪ್ತಿಗೆ ಈಗಿನ ಗುಜರಾತಿನ ದಕ್ಷಿಣ ಭಾಗದ ಮೇರೆಯಿಂದ ಆರಂಭಿಸಿ ಕೇರಳ ರಾಜ್ಯದ ಉತ್ತರ ತುದಿಯ ವರೆಗಿನ ಸಮುದ್ರ ಕಿನಾರೆ ಪ್ರದೇಶವನ್ನು ಹೊಂದಿತ್ತು. ಈಗಲೂ ಮತ್ಸ್ಯ ದೇಶದ ಜನರು ಮತ್ಸ್ಯವನ್ನು ತಮ್ಮ ಆಹಾರದ ಒಂದು ಮುಖ್ಯ ಭಾಗವನ್ನಾಗಿ ಮಾಡಿಕೊಂಡಿರುತ್ತಾರೆ. ಅಲ್ಲಿನ ಬ್ರಾಹ್ಮಣರು ಕೂಡಾ ಬಂಗಾಲಿಗಳಂತೆಯೇ ಮತ್ಸ್ಯ ಪ್ರಿಯರು ಹಾಗೂ ಮತ್ಸ್ಯ ಬ್ರಾಹ್ಮಣರು ಸಂಖ್ಯೆಯಲ್ಲಿ ಜಾಸ್ತಿ ಜನ ಇರುವರು.                                                                     ಲೇಖಕರು :  ಬಿ.ಆರ್. ರಾಮಚಂದ್ರ ರಾವ್ ಗುಹ್ಯ ಗ್ರಾಮ, ಕೊಡಗು