Dhechuru Rama Mandira

ದೇಚೂರು ಶ್ರೀ ರಾಮ ಮಂದಿರ 

                            ಈ ದೇಗುಲವು ಓಂಕಾರೇಶ್ವರ ದೇಗುಲದಿಂದ ಪೂರ್ವಕ್ಕೆ ಅನತಿ ದೂರದಲ್ಲಿದೆ. ಪ್ರಸ್ತುತ “ದೇಚೂರು ಶ್ರೀ ರಾಮ ವಿದ್ಯಾಗಣಪತಿ ದೇವಸ್ಥಾನ” ಎಂದು ಕರೆಯಲ್ಪಡುತ್ತಿರುವ ದೇಚೂರು ಶ್ರೀ ರಾಮ ಮಂದಿರವು ಒಂದು ರೀತಿಯಲ್ಲಿ ಪುರಾತನ ಇತಿಹಾಸವುಳ್ಳ ನವೀನ ದೇಗುಲ.

                      ಸುಮಾರು ಒಂದು ಶತಮಾನಗಳಷ್ಟು ಹಿಂದಿನ ಮಾತು. ನಗರದ ದೇಚೂರಿನಲ್ಲೊಂದು ಪುಟ್ಟ ಭಜನಾ ಮಂದಿರ. ಅಲ್ಲಿ ರಾಮಾಂಜನೇಯ ಸೇರಿದಂತೆ. ಇನ್ನಿತರ ದೇವತೆಗಳ ಚಿತ್ರಪಟಗಳು ಮಾತ್ರ ಇದ್ದವು. ಯಾವ ವಿಗ್ರಹಗಳೂ ಇರಲಿಲ್ಲ. ಆದರೆ ಪ್ರತಿ ಶನಿವಾರದಂದು ಅಲ್ಲಿ ಹಬ್ಬದ ಸಂಭ್ರಮ. ನೂರಾರು ಮಂದಿ ಸೇರಿ ಏಕಕಂಠದಲ್ಲಿ ಭಜನೆ ಹಾಡುತ್ತಿದ್ದರು. ಭಕ್ತಿ ಭಾವದಲ್ಲಿ ಮಿಂದು ಪಾವನರಾಗುತ್ತಿದ್ದರು. ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯುತ್ತಿತ್ತು. ಇಂತಹ ದೇಗುಲದ ವತಿಯಿಂದ 86 ವರ್ಷಗಳ ಹಿಂದೆ ದಸರಾ ಉತ್ಸವ ಮಂಟಪವನ್ನು ಹೊರ ತರುವ ಸಂಪ್ರದಾಯ ಆರಂಭವಾಯಿತು. ಅಂದು ದೇಚೂರಿನಿಂದಲೇ ಹೊರಡುತ್ತಿದ್ದ ಮತ್ತೊಂದು ಮಂಟಪ “ರಘು ರಾಮ ಮಂದಿರ”ದ ಮಂಟಪ. ದಸರಾ ಉತ್ಸವದಿಂದಲೇ ಪ್ರಮುಖವಾಗಿ ಗುರುತಿಸಲ್ಪಡುವ ದೇಚೂರು ಶ್ರೀ ರಾಮ ಮಂದಿರದೊಂದಿಗೆ ಬಾಲ್ಯದಿಂದಲೂ ಒಡನಾಟವನ್ನು ಹೊಂದಿರುವ ಹಿರಿಯರೊಬ್ಬರು ದಶಕಗಳ ಹಿಂದಿನ ರೋಚಕ ದಿನಗಳನ್ನು ನೆನೆಯುತ್ತಾರೆ. ಅಂದೆಲ್ಲಾ ಹೊರಡುತ್ತಿದ್ದುದ್ದು ಮಣಿ ಮಂಟಪಗಳು 12 ಅಥವಾ 16 ಕಂಬಗಳ ಮಣಿ ಮಂಟಪಗಳನ್ನು ತಯಾರಿಸುವ ಕಾರ್ಯ ದಸರಾ ಉತ್ಸವಕ್ಕಿಂತ ಮೂರು ತಿಂಗಳ ಮುಂಚಿನಿಂದಲೇ ಆರಂಭವಾಗುತ್ತಿದ್ದವು. ಕಂಬಗಳ ಮೇಲೆ ಸುಂದರ ಕೆತ್ತನೆ ಇರುತ್ತಿತ್ತು. ಮದ್ರಾಸ್ (ಚೆನೈ)ನಿಂದ ತರಿಸಲಾಗಿತ್ತಿದಂತಹ ನೀಲಿ, ಹಸಿರು ಮತು ಬಿಳಿ ಬಣ್ಣದ ಸಣ್ಣ-ಸಣ್ಣ ಮಣಿಗಳನ್ನು ಪೋಣಿಸಿ ಕಲಾತ್ಮಕವಾಗಿ ಆ ಕಂಬಗಳಿಗೆ ಜೋಡಿಸಲಾಗಿತ್ತಿತ್ತು. ಈ ಕಾರ್ಯದಲ್ಲಿ ಮಣಿ, ತಗಡು ಮತ್ತು ವ್ಯಾಂಡಮ್ ನ ಬಳಕೆಯೂಗುತ್ತಿತ್ತು. ಮಂಟಪದ ನಾಲ್ಕು ಮೂಲೆಗೂ ‘ತಂಡಮಾಲೆ’ಗಳಿಂದ ಅಲಂಕರಿಸಲಾಗಿತ್ತಿತ್ತು. ಹೀಗೇ ಸರ್ವಾಲಂಕೃತವಾದ ಮಂಟಪದಲ್ಲಿ ದೇವರ ಚಿತ್ರ ಪಟವಿರುತ್ತಿತ್ತು. ಜೊತೆಗೆ ಚಾಮರ ಬೀಸಲು ಪುಟಾಣಿ ಬಾಲಕಿಯರೊಂದಿಗೆ ಎಂಟು ಮಂದಿ ಮಂಟಪವನ್ನು ಹೊತ್ತು ಸಾಗುತ್ತಿದ್ದರು.

                       ದೇಚೂರು ಶ್ರೀ ರಾಮ ಮಂದಿರವು ಶಿಥಿಲಾವಸ್ಥೆಯನ್ನು ತಲುಪಿದಾಗ ಅದನ್ನು ಬೇರೆಡೆಗೆ ವರ್ಗಾಯಿಸುವ ಚಿಂತನೆ ನಡೆದು ದೇಗುಲದಿಂದ ಅನತಿ ದೂರದಲ್ಲಿ (ಅಂದರೆ ಪ್ರಸ್ತುತ ದೇಗುಲವಿರುವ ಸ್ಥಳದಲ್ಲಿ) ಹೊಸ ದೇಗುಲದ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ಭಕ್ತಾಧಿಗಳು, ದಾನಿಗಳ ಸಹಕಾರದಿಂದ ಇಂದು ದೇಚೂರಿನಲ್ಲಿ ಸುಂದರ ದೇವಾಲಯವೊಂದು ನಿರ್ಮಾಣಗೊಂಡು ಏಳು ವರ್ಷಗಳು ಕಳೆದಿವೆ. ಇಲ್ಲಿ ಶ್ರೀ ರಾಮ ಮತ್ತು ಬಲಮುರಿ ಗಣಪತಿಯು ನಿತ್ಯ ಪೂಜಿಸಲ್ಪಡುತ್ತಿರುವ ದೈವಗಳು. ಜೊತೆಗೆ ನವಗ್ರಹ ಮತ್ತು ನಾಗದೇತೆಯ ಪ್ರತಿಷ್ಠಾಪನೆ ಸಹ ನಡೆದಿದೆ. ನಿತ್ಯ ಪೂಜೆಯೊಂದಿಗೆ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ದೇವಾಲಯ ಆಡಳಿತ ಮಂಡಳಿಯಿಂದ ನಿಯುಕ್ತಿಯಾಗಿರುವ ಅರ್ಚಕರು ಪೂಜಾ ಕೈಂಕರ್ಯಗಳ ಜವಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.