Daivaaraadhane

   ದೈವಾರಾಧನೆ :

                   ಸಂಸ್ಕೃತಿ,ಧರ್ಮಗಳು ಸರಿಯಾಗಿ ಕಣ್ಣುಬಿಡುವ ಮೊದಲೇ ಇತಿಹಾಸಪೂರ್ವದ ಶಿಲಾಯುಗದ ಮಾನವನು ಪ್ರಕೃತಿಯ ವಿವಿಧ ವಿದ್ಯಮಾನಗಳಿಗೆ ಸ್ಪಂದಿಸಿ ಕೆಲವೊಂದು ಪ್ರಾಕೃತಿಕ ಶಕ್ತಿಗಳನ್ನು ಭಿನ್ನ ಭಿನ್ನ ರೂಪಗಳಲ್ಲಿ ಪೂಜಿಸಿದ್ದನೆಂದು ಊಹಿಸಬಹುದು. ಮನುಷ್ಯನ ಭಯ, ಬಯಕೆ, ಕನಸು, ಕಲ್ಪನೆಗಳು ಎಷ್ಟೆಲ್ಲಾ ರೂಪಗಳನ್ನು ತಳೆದು ಯಾವೆಲ್ಲ ನೆಲೆಗಳಲ್ಲಿ ಕ್ರಿಯಾಶೀಲವಾಗುತ್ತ ಬಂದಿದೆ ಎಂಬುದನ್ನು ಪರಿಭಾವಿಸುವಾಗ ಬೆರಗಾಗುತ್ತದೆ. ಭಾರತದ ವಿಶಿಷ್ಟ ಆರಾಧನಾ ಪ್ರಸ್ಥಾನಗಳಲ್ಲಿ ತುಳುನಾಡಿನ ದೈವಾರಾಧನಾ ಪ್ರಸ್ಥಾನವೂ ಒಂದಾಗಿದೆ. ಇದೊಂದು ಪ್ರಾಚೀನ ಜನಪದ ಆರಾಧನಾ ವಿಧಾನ, ಪ್ರತಿಯೊಂದು ಸಂಸ್ಕೃತಿಗೂ ಅದರದ್ದೇ ಆದ ಅನನ್ಯತೆ ಇರುವುದನ್ನು ಗುರುತಿಸಬಹುದು. ಜನಪದ ಸಮೂಹಗಳು ತಮ್ಮ ಅನುಭವದ ಕಕ್ಷೆಯೊಳಗೆ ಬಂದ ಹಲವಾರು ಅಂಶಗಳನ್ನು ಸ್ವೀಕರಿಸಿ ತಮ್ಮದೇ ಆದ ವಿವಿಧ ಆರಾಧನಾ ಪದ್ಧತಿಗಳನ್ನು ಪ್ರಾದೇಶಿಕವಾಗಿ ಬೆಳೆಸಿಕೊಂಡು ಬಂದಿವೆ.
                 

                     ನೂರಾರು ವರ್ಷಗಳಿಂದ ತುಳುನಾಡಿನ ಜನರ ಸಾಂಸ್ಕøತಿಕ ಬದುಕನ್ನು ನಿರ್ದೇಶಿಸುತ್ತ ಬಂದಿರುವ ಭೂತರಾಧನಾ ಸಂಪ್ರದಾಯವು ಹಲವಾರು ಸಾಂಸ್ಕøತಿಕ ಅಂಶಗಳನ್ನು ಒಳಗೊಂಡಿರುವ ವಿಲಕ್ಷಣ ಬೆಸುಗೆಯಾಗಿದೆ. ಇದೊಂದು ಧಾರ್ಮಿಕ ರಂಗ ಭೂಮಿಯೂ ಆಗಿದ್ದು, ಇದರಲ್ಲಿ ಆರಾಧನಾಂಶ, ಕಲಾತ್ಮಕಾಂಶ, ಮನೋರಂಜಕಾಂಶ, ನ್ಯಾಯವಿತರಣಾಂಶ ಇತ್ಯಾದಿಗಳು ಸೇರ್ಪಡೆಗೊಂಡು ಇದೊಂದು ಸಂಕೀರ್ಣ ವ್ಯವಸ್ಥೆಯೇ ಆಗಿದೆ. ಇದೊಂದು ವರ್ಣಮಯಲೋಕ; ರಮ್ಯಾದ್ಭುತ ಪ್ರಪಂಚ. ಬಣ್ಣ, ನೃತ್ಯ, ಸಂಗೀತ, ಶಿಲ್ಪ, ಸಾಹಿತ್ಯಾದಿಗಳು ವಿಚಿತ್ರವಾಗಿ ಮಿಳಿತವಾಗಿರುವ ವಿಶಿಷ್ಟ ವೇದಿಕೆ. ಇದರಲ್ಲಿ ಕ್ರಿಯಾಶೀಲವಾಗುವ ಪ್ರತಿಯೊಂದು ಘಟಕದ ಆಳವಾದ ಅಧ್ಯಯನ ಕೈಗೊಳ್ಳಲು ಸಾಧ್ಯವಿದೆ. ದೈವಾರಾಧನೆಯನ್ನು ಇತಿಹಾಸಶಾಸ್ತ್ರ, ಸಮಾಜಶಾಸ್ತ್ರ, ಸಾಂಸ್ಕøತಿಕ ಮನಃಶಾಸ್ತ್ರ, ನ್ಯಾಯಶಾಸ್ತ್ರ, ತತ್ವಶಾಸ್ತ್ರ, ಕಲಾಮೀಮಾಂಸೆ ಇತ್ಯಾದಿ ಅನೇಕ ಅಧ್ಯಯನ ಶಿಸ್ತುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದು. ಒಟ್ಟಿನಲ್ಲಿ ಈ ಆರಾಧನಾ ಪದ್ಧತಿ ತುಳುನಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದು ಈಗಲೂ ಊರ್ಜಿತವಾಗಿಯೇ ಇರುವ ಸಂಪ್ರದಾಯವಾಗಿದೆ.
          

                        ತುಳುನಾಡಿನ ದೈವಗಳನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಹೇಳುವಂತಿಲ್ಲ. ಸುಮಾರು ನಾಲ್ಕು ನೂರರಷ್ಟು ಇರಬಹುದು. ಕೆಲವು ದೈವಗಳಿಗೆ ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರುಗಳಿರುವುದುಂಟು. ಈ ದೈವಗಳ ಮೂಲ, ಅಂತಸ್ತು, ವ್ಯಾಪ್ತಿ, ಸ್ವರೂಪ ಇತ್ಯಾದಿಗಳ ದೃಷ್ಟಿಯಿಂದ ಹಲವು ಬಗೆಯಿಂದ ವರ್ಗೀಕರಿಸಬಹುದು. ಪಂಜುರ್ಲಿ, ಮೈಸಂದಾಯ, ಪಿಲಿಚಾಮುಂಡಿ ಭೂತಗಳು ಪ್ರಾಣಿಮೂಲದವುಗಳಾಗಿವೆ. ಶತಮಾನಗಳ ಹಿಂದೆ ವಿಪುಲವಾಗಿ ಕಾಡುಗಳಿದ್ದ ಕಾಲದಲ್ಲಿ, ಕಾಡುಪ್ರಾಣಿಗಳ ಹಾವಳಿಯ ಹಿನ್ನೆಲೆಯಲ್ಲಿ ಕಾಡುಹಂದಿ, ಕಾಡುಕೋಣ, ಹುಲಿಗಳ ಅಂತರ್ಯಾಮಿ ಶಕ್ತಿಗಳನ್ನು ಒಲಿಸಿ ಓಲೈಸುವ ಅಂಗವಾಗಿ ಅವುಗಳ ದೈವೀಕರಣವಾಗಿರುವುದು ಸಹಜ. ಭೂತಸ್ಥಾನಗಳ ಬಂಡಿಗಳಲ್ಲಿ ಭೂತವಾಹನಗಳಾಗಿ ಹಂದಿ, ಹುಲಿ, ಆನೆ ಮೊದಲಾದವುಗಳ ವಿಗ್ರಹಗಳಿರುವುದುಂಟು.ತುಳುನಾಡಿನ ನಾಗಾರಾದನೆಯಂತೂ ಪ್ರಸಿದ್ಧವಾದುದು. ನಾಗನೂ ಅರಣ್ಯ ಮೂಲಕ್ಕೆ ಸಂಬಂಧ ಪಟ್ಟವನೇ. ನಾಗನ ಬನವಿಲ್ಲದ ಗ್ರಾಮವೊಂದು ಈ ನಾಡಿನಲ್ಲಿರಲಾರದು. ದೈವಗಳಿಗೂ ನಾಗನಿಗೂ ನಿಕಟ ಸಂಬಂಧವಿರುವುದನ್ನು ಕಾಣಬಹುದು. ಪುರಾಣಗಳಿಂದ ಇಳಿದು ಬಂದು ಆರಾಧನಾರಂಗದಲ್ಲಿ ಕಾಣಿಸಿಕೊಂಡ ಕೆಲವು ದೈವಗಳು ತುಳುನಾಡಿನಲ್ಲಿವೆ. ರಕ್ತೇಶ್ವರಿ, ಚಾಮುಂಡಿ, ವಿಷ್ಣುಮೂರ್ತಿ, ಭೈರವ, ಗುಳಿಗ ಮೊದಲಾದವು ಈ ವರ್ಗಕ್ಕೆ ಸೇರಿವೆ.
                         

                          ಒಂದು ಕಾಲದಲ್ಲಿ ಮಾನವಜೀವಿಗಳಾಗಿದ್ದು ಯಾವುದೋ ಕಾರಣಕ್ಕೆ ಅಕಾಲ ಮರಣವನ್ನು ಹೊಂದಿದ ಹಲವಾರು ವಿಶಿಷ್ಟ ವ್ಯಕ್ತಿಗಳು ಮರಣಾನಂತರ ದೈವರೂಪಿಗಳಾಗಿ ಪೂಜೆಗೊಳ್ಳುತ್ತ ಬಂದಿದ್ದಾರೆ. ಕೊರಗತನಿಯ, ಕೋಟೆದ ಬಬ್ಬು, ಬಬ್ಬರ್ಯ, ಕೋಟಿ-ಚೆನ್ನಯ ದಂಡನಾಯಕ, ಕಾಂತಬಾರೆ-ಬೂದಾದಾರೆ, ಬಿಲ್ಲರಾಯ-ಬಿಲ್ಲಾರ್ತಿ, ಬಸ್ತಿನಾಯಕ, ಕಲ್ಕುಡ, ಕಲ್ಲುರ್ಟಿ, ನಾಯರ್ ಭೂತ, ಬಿಕ್ರು ಮೇಲಾಂಟ, ಬೀರ್ಣಾಳ್ವ, ಮದ್ಮಾಳ್ ಭೂತ, ಮಾಯಂದಾಳ್, ತನ್ನಿ ಮಾನಿಗ, ಆಲಿಭೂತ – ಮೊದಲಾದುವು ಮಾನವ ಮೂಲ ದೈವಗಳು. ಇವರಲ್ಲಿ ವೀರರಿದ್ದಾರೆ, ಜನೋಪಕಾರಿಗಳಿದ್ದಾರೆ, ಶಿಲ್ಪಿ ಮೊದಲಾದ ವಿವಿಧ ವರ್ಗದವರಿದ್ದಾರೆ, ಸಾಧ್ವಿಯವರಿದ್ದಾರೆ, ದರ್ಪದಬ್ಬಾಳಿಕೆ ಮಾಡಿದವರಿದ್ದಾರೆ. ಭೂತ ಬಾಧೆಯಿಂದ ಅಸುನೀಗಿದವರೆನ್ನಲಾದವರೂ ಇದ್ದಾರೆ. ಹಾಗಾಗಿ ಭೂತರಾಧನೆಯಲ್ಲಿ ವೀರಾರಾಧನೆ, ಪಿತೃ ಆರಾಧನೆ, ಸಾಧ್ವಿಯರ ಪೂಜೆ, ಶಕ್ತಿ ಉಪಾಸನೆ, ಪ್ರಕೃತಿಪೂಜೆ ಇತ್ಯಾದಿ ಹಲವು ವಿಚಾರಗಳು ಸೇರ್ಪಡೆಗೊಂಡಿವೆ.
            

                            ದೈವಗಳಲ್ಲಿ ಪುರುಷರೂಪದವುಗಳು ಇರುವಂತೆ ಸ್ತ್ರೀರೂಪದ ದೈವಗಳು ಸಾಕಷ್ಟಿವೆ. ಉಭಯಲಿಂಗಗಳನ್ನು ಸಾಂಕೇತಿಕವಾಗಿ ತಳೆದ ಅರ್ಧನಾರೀ ಸ್ವರೂಪದ ದೈವಗಳೂ ಇವೆ. (ಜುಮಾದಿ, ಕೊಡಮಣಿತ್ತಾಯ ಮೊದಲಾದ ದೈವಗಳ ಸ್ವರೂಪ ವರ್ಣನೆಯಲ್ಲಿ ಈ ಅಂಶ ವ್ಯಕ್ತವಾಗುತ್ತದೆ). ಸಮಾಜವ್ಯವಸ್ಥೆಯಲ್ಲಿ ತೋರಿಬರುವ ಶ್ರೇಣಿಬದ್ಧ ಪದ್ಧತಿ ಮತ್ತು ಊಳಿಗಮಾನ್ಯ ಪದ್ಧತಿಯ ಪ್ರಭಾವವು ಸಹಜವಾಗಿ ದೈವರಾಧನಾ ವ್ಯವಸ್ಥೆಯಲ್ಲೂ ವ್ಯಕ್ತವಾಗಿದೆ. ದೈವಗಳ ಆರಾಧನಾ ಸ್ಥಳಗಳೂ ವೈವಿಧ್ಯಪೂರ್ಣವಾಗಿವೆ. ಬ್ರಹ್ಮಸ್ಥಾನ ಅಥವಾ ಆಲಡೆ, ಭೂತದ ಕೊಟ್ಟಿಗೆ, ಭೂತಸ್ಥಾನ, ಚಾವಡಿ, ಮಾಡ, ಗರಡಿ, ಬನ ಇತ್ಯಾದಿಗಳಲ್ಲಿ ದೈವಗಳು ಒಂಟಿಯಾಗಿಯೋ, ಜಂಟಿಯಾಗಿಯೋ ನೆಲಸಿರುತ್ತವೆ. ದೈವಗಳ ಸಂಕೇತವಾಗಿ ‘ಮೊಗ’ (ಮುಖವಾಡ), ಕಡ್ತಲೆ (ಖಡ್ಗ), ಶೂಲ, ಘಂಟಾಮಣಿ ಇತ್ಯಾದಿ ದೈವದ ‘ಭಂಡಾರ’ ವಸ್ತುಗಳು ನಿರ್ದಿಷ್ಟ ಸ್ಥಾನಗಳಲ್ಲಿ ಪವಿತ್ರ ಪರಿಸರದಲ್ಲಿ ಇರಿಸಲ್ಪಟ್ಟು ಕಾಲಕಾಲಕ್ಕೆ ಪೂಜಿಸಲ್ಪಡುತ್ತವೆ. ದೈವಗಳ ಆರಾಧನಾ ಸ್ಥಾನಗಳಿಗೆ ನಿರ್ದಿಷ್ಟವಾಗಿ ವಾಸ್ತುಶಿಲ್ಪದ ಶಾಸ್ತ್ರೀಯ ಶೈಲಿ ಇರುತ್ತದೆ. ಉಪಯೋಗಿಸುವ ಎಲ್ಲ ಪರಿಕರಗಳಿಗೂ ನಿಶ್ಚಿತ ಸ್ವರೂಪಗಳಿರುತ್ತವೆ.
               

                            ದೈವಗಳಿಗೆ ಕಾಲಕಾಲಕ್ಕೆ ತಂಬಿಲ, ಅಗೆಲು, ಕೋಲ, ನೇಮ, ದೊಂಪದ ಬಲಿ, ಮೆಚ್ಚಿ, ಮೈಮೆ, ಗೆಂಡ ಮೊದಲಾದ ವಿವಿಧ ರೀತಿಯ ಸೇವೆಗಳು ಸಲ್ಲುತ್ತವೆ. ನಿಶ್ಚಿತ ಸೇವೆಗಳಲ್ಲಿ ಪೈಚಿಲ್ ನೇಮ, ಧರ್ಮ ನೇಮ, ಧರ್ಮಮೆಚ್ಚಿ ಮೊದಲಾದ ವಿಶೇಷ ಸೇವೆಗಳು ಹರಕೆಯಾಗಿಯೂ ಜರುಗಿಸಲ್ಪಡುತ್ತವೆ. ಪ್ರತಿಯೊಂದು ಕಲಾಪಕ್ಕೂ ನಿರ್ದಿಷ್ಟ ರೀತಿ ನೀತಿಗಳಿರುತ್ತವೆ. ಗ್ರಾಮಕ್ಕೆ ಸಂಬಂಧಪಟ್ಟ ದೇವಸ್ಥಾನವಾಗಿದ್ದರೆ ಗ್ರಾಮವಾಸಿಗಳಾದ ಭಿನ್ನ ಭಿನ್ನ ಜನವರ್ಗಗಳ ಪ್ರತಿನಿಧಿಗಳು ವಿಧಿವತ್ತಾಗಿ ಮಾಡಬೇಕಾದ ಕೆಲವೊಂದು ಕರ್ತವ್ಯಗಳು ಪರಂಪರೆಯಿಂದ ನಿರ್ದೇಶಿಸಲ್ಪಟ್ಟಿರುತ್ತವೆ. ಗ್ರಾಮಸ್ಥರೆಲ್ಲರೂ ವಂತಿಗೆ ವರಾಡುಗಳನ್ನಂತೂ ಸಹಜವಾಗಿಯೇ ತೆರಬೇಕಾಗುತ್ತದೆ. ಗ್ರಾಮಸ್ಥರೆಲ್ಲರೂ ಒಂದೆಡೆ ಕಲೆತು ನಡೆದುಕೊಳ್ಳುವ ಈ ವ್ಯವಸ್ಥೆಯ ಹಿಂದೆ ಸಹಕಾರ ಪ್ರವೃತ್ತಿ, ತ್ಯಾಗ, ಸಮಾಜಪ್ರೇಮ ಮುಂತಾದ ಗುಣಗಳ ಎಳೆಗಳು ಗೊಣಸುಗೊಂಡಿವೆ.
             

                            ಎಷ್ಟೋ ವೇಳೆ ಕೋರ್ಟುಕಛೇರಿಗಳಲ್ಲಿ ನಡೆಯುವುದಕ್ಕಿಂತ ಚೊಕ್ಕದಾದ ನ್ಯಾಯ ತೀರ್ಮಾನವು ದೈವಗಳ ಸಮಕ್ಷಮದಲ್ಲಿ ನಡೆಯುತ್ತದೆ. ಸರಕಾರದ ಅಧಿಕಾರಿಗಳಿಗೆ ಅಂಜದ ಎಷ್ಟೋ ವ್ಯಕ್ತಿಗಳು ಭೂತಗಳ ಪ್ರತಾಪಕ್ಕೆ ತಲೆತಗ್ಗಿಸುತ್ತಾರೆ. ಹತ್ತು ಮಂದಿಯ ಸಮ್ಮುಖದಲ್ಲಿ ಆಗುವ ನ್ಯಾಯತೀರ್ಮಾನ ದೈವದ ಅಭಯವಾಕ್ಯ ಇವುಗಳಿಂದ ಮನಸ್ಸಿಗೊಂದು ಖಚಿತತೆ, ಧೈರ್ಯ, ಆಶಾವಾದ ಮೂಡಿ ಜೀವನದ ಸಮಸ್ಯೆಗಳನ್ನು ಎದುರಿಸಲು ತಕ್ಕಮಟ್ಟಿಗೆ ಸಾಮಥ್ರ್ಯ ಒದಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
             

                            ಕುಟುಂಬದ ದೈವಗಳಿಗೆ ಸಲ್ಲಿಸುವ ಅಗೆಲು, ಕೋಲ ಇತ್ಯಾದಿ ಸಂದರ್ಭಗಳಲ್ಲಿ ಸಂಬಂಧಪಟ್ಟವರು ಒಂದೆಡೆ ಕಲೆತು ಊಟ ಉಪಚಾರಗಳನ್ನು ಹೊಂದುವ, ಮಾತುಕತೆಯಾಡುವ, ಪ್ರೀತಿವಿಶ್ವಾಸಗಳನ್ನು ಪ್ರಕಟಿಸುವ ಅಪೂರ್ವ ಸನ್ನಿವೇಶದಿಂದ ಲಭಿಸುವ ಕೌಟುಂಬಿಕ ಪ್ರಯೋಜನ ಅತ್ಯಂತ ವಿಶೇಷವಾದದ್ದು. ಪರಸ್ಪರ ಮನಸ್ತಾಪವಿದ್ದಲ್ಲಿ ಅಂಥ ದಿನಗಳಲ್ಲಿ ಅದು ಸಾಮಾನ್ಯವಾಗಿ ದೂರವಾಗುತ್ತದೆ.
              

                              ದೈವಾರಾಧನೆಗೆ ನೇರವಾಗಿ ಸಂಬಂಧಪಟ್ಟ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ಕೆಲವೊಂದು ಮುಖ್ಯವಿಚಾರಗಳನ್ನು ಸಮಾಲೋಚನೆ ಮಾಡಿ ದೈವರಾಧನೆಯಂಥ ಅದ್ಭುತ ಕಲೆಯನ್ನು ಇಂದಿನ ಸಮಾಜಕ್ಕೆ ಹೆಚ್ಚು ಉಪಯುಕ್ತ ಹಾಗೂ ಸಂಗತಗೊಳಿಸುವ ಅಗತ್ಯವಿದೆಯೆನ್ನಬಹುದು. ಆಗ ತುಳುನಾಡಿನ ಈ ಭವ್ಯ ಆರಾಧನಾ ಪರಂಪರೆ ಇನ್ನಷ್ಟು ವ್ಯಾಪಕವಾದ ಅರ್ಥವನ್ನೂ ಸಾಮಾಜಿಕ ಪ್ರಯೋಜನವನ್ನು ನೀಡುವ ಸಾಮಥ್ರ್ಯವನ್ನು ಪಡೆಯಬಹುದು.
  ತುಳುನಾಡಿನ ದೈವಾರಾಧನೆ ಲೇಖಕರು : ಅಮೃತ ಸೋಮೇಶ್ವರ (ಸಂಗ್ರಹ : ಜಿಜ್ಞಾಸೆಯ ತುಣುಕುಗಳು)