Ghuhya Agastheshwara Temple

ಗುಹ್ಯ ಅಗಸ್ತ್ಯೇಶ್ವರ ದೇವಾಲಯ:-

                              " ಕೊಡಗಿನ ಆದಿಮಾತೆ ಕಾವೇರಿಯ ನಾಡಿನಲ್ಲಿ ಗಮನ ಸೆಳೆಯುವ ಹಲವು ದೇವಾಲಯಗಳಲ್ಲಿ ಕಾವೇರಿ ತಟದ ಸುಂದರವೂ ಪುರಾತನವೂ ಆದ ದೇವಾಲಯ ಗುಹ್ಯ ಅಗಸ್ತ್ಯೇಶ್ವರ"

                           ಗುಹ್ಯ ಎಂದರೆ ಗುಹೆ, ಗುಟ್ಟು ಎಂಬರ್ಥ. ಕುಬೇರನ ಸಾಲ ತೀರಿಸಲಾಗದೆ ದೇವಲೋಕ ಬಿಟ್ಟು ಭೂಮಿಗೆ ಬಂದಿಳಿದು ಗುಹ್ಯದ ಗೊಂಡಾರಣ್ಯದಲ್ಲಿ ವಿಷ್ಣು ಅಡಗಿ ಕುಳಿತಿದ್ದರಿಂದ ಗುಹ್ಯ ಎಂಬ ಹೆಸರು ಬಂತು ಎಂಬುದು ಒಂದು ಅಭಿಪ್ರಾಯ. ಮತ್ತೊಂದು ಮೂಲದ ಪ್ರಕಾರ ಹಿಂದೆ ಹಲವು ಋಷಿಗಳು ಇಲ್ಲಿನ ಗುಹೆಯಲ್ಲಿ ತಪಸ್ಸು ಮಾಡಿದ್ದರಿಂದ ಆಹೆಸರು ಬಂತು ಎನ್ನುತ್ತಾರೆ ಊರ ಹಿರಿಯಿರು. 

                          ಗುಹ್ಯ ಎಂಬ ಹೆಸರು ಬರಲು ಕಾರಣ ಅದೇನೇ ಇರಲಿ. ಇಲ್ಲಿನ ಪುರಾತನ ಅಗಸ್ತ್ಯೇಶ್ವರ ದೇವಾಲಯ ಗುಹ್ಯ ಅಗಸ್ತ್ಯೇಶ್ವರ ದೇವಾಲಯ ಎಂದೇ ಖ್ಯಾತಿ ಹೊಂದಿದೆ. ಪ್ರಸಕ್ತ ಗುಹ್ಯ ಎನ್ನುವುದು ಸಿದ್ದಾಪುರ ಸಮೀಪದ ಒಂದು ಗ್ರಾಮ. ಇದು ಸಿದ್ದಾಪುರದಿಂದ ಐದಿ ಕಿ.ಮೀ. ದೂರದಲ್ಲಿದೆ. ಸಿದ್ದಾಪುರದಿಂದ ವೀರಾಜಪೇಟೆ ಮಾರ್ಗದಲ್ಲಿ ಎರಡು ಕಿ.ಮೀ ಸಾಗಿ ಬಲಭಾಗದ ರಸ್ತೆಯಲ್ಲಿ ಮೂರು ಕಿ.ಮೀ. ಕ್ರಮಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿನ ಕಾಫಿಯ ತೋಟದ ಸೊಬಗು ಸವಿಯುತ್ತಾ ಬಂದರೆ ಕಾವೇರಿ ತೀರದ ಅಗಸ್ತ್ಯೇಶ್ವರ ದೇವಾಲಯವನ್ನು ತಲುಪಬಹುದು.

                          ಗುಹ್ಯ ಅಗಸ್ತ್ಯೇಶ್ವರ ದೇವಾಲಯ ನೋಡಲು ಸುಂದರವಾಗಿದ್ದರೂ ಇದರ ಪ್ರಾಂಗಣ ಬಹುಚಿಕ್ಕದು. ಇಲ್ಲಿನ ಗರ್ಭ ಗುಡಿ ವೃತ್ತಾಕಾರವಾಗಿದ್ದು ಗಮನ ಸೆಳೆಯುತ್ತದೆ. ಅಗಸ್ತ್ಯನಿಂದ ಪ್ರತಿಷ್ಠಾಪಿಸಲ್ಲಪಟ್ಟ ಈಶ್ವರಲಿಂಗವು ಬಹು ಆಳದಲ್ಲಿ ಹುದುಗಿದೆ ಎನ್ನಲಾಗಿತ್ತದೆ. ಗರ್ಭ ಗುಡಿಯ ಎರಡು ಅಂಕಣಗಳನ್ನು ಹೊಂದಿದೆ.

                        ಈ ದೇವಾಲಯ ಮಹರ್ಷಿ ಅಗಸ್ತ್ಯನಿಂದ ಆರಂಭವಾಯಿತು ಎಂಬಿದಕ್ಕೆ ಪುರಾವೆಯಾದ ಕಥೆಯೊಂದು ಪ್ರಚಲಿತದಲ್ಲಿದೆ. ಕಥೆಯ ಪ್ರಕಾರ ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆ ತಂದು ಕಾವೇರಿಯನ್ನು ಕಮಂಡಲದಲ್ಲಿ ಬಂಧಿಸಿ, ಮಾತಿಗೆ ತಪ್ಪಿ ಏಕಾಂಗಿಯಾಇ ಬಿಟ್ಟು ಹೋದ ಪತಿ ಅಗಸ್ತ್ಯನ ವರ್ತನೆಗೆ ರೋಸಿ ಕಾವೇರಿ ಕಮಂಡಲದಿಂದ ಇಳಿಯುತ್ತಾಳೆ. ತಾನು ಜಲರೂಪಿಣಿಯಾಗಿ ಹರಿದು ಭಾಗಮಂಡಲದಲ್ಲಿ ಕಾವೇರಿ ಕನ್ನಿಕೆಯರೊಡಗೂಡಿ ದಾಪಗಾಲಿಕ್ಕುತ್ತಾಳೆ. ನಡೆದ ಘಟನೆಯನ್ನು ತಡವಾಗಿ ಅರಿತ ಅಗಸ್ತ್ಯ ನೀರಿನ ಜಾಡನ್ನೇ ಹಿಡಿದು ಓಡಿ ಬರುತ್ತಾನೆ. ಮಹರ್ಷಿ ಅಗಸ್ತ್ಯ ಎಷ್ಟೇ ಬಾರಿ ವಿನೀತನಾಗಿ ಕೇಳಿಕೊಂಡರೂ, ಕೇಳದ ಕಾವೇರಿ ನಾನಾ ಕಡೆಗಳಲ್ಲಿ ಸಾಗುತ್ತಾಳೆ. ಆಕೆಯ ಮನವೊಲಿಸಲಾಗದ ಅಗಸ್ತ್ಯ ಅಲ್ಲಲ್ಲಿ ಮರಳಲಿಂಗ ಪೂಜಿಸಿ ಭಜಿಸುತ್ತಾನೆ. ಆದರೂ ಫಲ ಸಿಗಲಿಲ್ಲ, ಇತ್ತ ಕಾವೇರಿ ಗುಹ್ಯ ಗ್ರಾಮಕ್ಕೆ ಕಾಲಿರಿಸಿದಾಗ ಅಗಸ್ತ್ಯ ಕೊನೆಯ ಪ್ರಯತ್ನವೆಂದು ಸಪ್ತರ್ಷಿಗಳ ಮೊರೆ ಹೋಗುತ್ತಾನೆ. ಅಗಸ್ತ್ಯನ ಕಳವಳಕ್ಕೆ ಸಪ್ತರ್ಷಿಗಳು ಪ್ರತ್ಯಕ್ಷರಾಗಿ ಕಾವೇರಿಯನ್ನು ನಿಲ್ಲುವಂತೆ ಕೋರುತ್ತಾರೆ. ಸಪ್ತರ್ಷಿಗಳ ಕೋರಿಕೆಗೆ ಮನ್ನಣೆ ಇತ್ತ ಕಾವೇರಿ ಗುಹ್ಯದಲ್ಲಿ ನಿಲ್ಲುತ್ತಾಳೆ. ಅಲ್ಲಿನ ಅಶ್ವತ್ಥ ವೃಕ್ಷದ ಅಡಿಯಲ್ಲಿ ಸಂಧಾನ ಮಾತುಕತೆ ನಡೆಯುತ್ತದೆ. ಅದರೂ ಕಾವೇರಿ ತನ್ನ ಹಠ ಬಿಡಲಿಲ್ಲ. ತಾನು ಲೋಕಕಲ್ಯಾಣಕ್ಕೆ ಹೊರಟಿರುವೆನೆಂದು ತನ್ನನ್ನು ತಡೆಯಬೇಡಿರೆಂದು ವಿನಯಪೂರ್ವಕವಾಗಿ ತಿಳಿಸಿ ಕಾವೇರಿ ಅಲ್ಲಿಂದ ಮುಂದೆ ಸಾಗುತ್ತಾಳೆ. ಬೇಸತ್ತ ಅಗಸ್ತ್ಯ ಮಹರ್ಷಿ ಸಂಧಾನ ನಡೆದ ಊರಿನಲ್ಲಿ ಲಿಂಗವೊದನ್ನು ಸ್ಥಾಪಿಸಿ ಪೂಜಿಸುತ್ತಾನೆ. ಅದೇ ಈಗಿನ ಗುಹ್ಯ ಅಗಸ್ತ್ಯೇಶ್ವರ ದೇವಾಲಯವಾಗಿ ಖ್ಯಾತಿ ಹೊಂದಿದೆ.

                         ಗುಹ್ಯ ತೀರ್ಥ ಸ್ನಾನ ತುಂಬ ಪ್ರಸಿದ್ದ. ದೀಪಾವಳಿ ಅಮಾವಾಸ್ಯೆಯಂದು ಭಕ್ತರು ಕಾವೇರಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ. ಎಂಬ ನಂಬಿಕೆ. ಅಂತೆಯೇ ಸುತ್ತಮುತ್ತಲ ಊರುಗಳಿಂದ ಭಕ್ತಾದಿಗಳು ಬಂದು ಗುಹ್ಯ ತೀರ್ಥ ಸ್ನಾನ ಮಾಡುತ್ತಾರೆ. ದೀಪಾವಳಿಯ ಸಂದರ್ಭದಲ್ಲಿ ಐದು ದಿನಗಳ ಕಾಲ ನಡೆಯುವ ವಾರ್ಷಿಕ ಉತ್ಸವ ಅಮಾವಾಸ್ಯೆಯಂದು ನಡೆಯುವ ಜಳಕದೊಂದಿಗೆ ಮುಕ್ತಾಯವಾಗುತ್ತದೆ. ಬಲಿಪಾಡ್ಯಮಿಯಂದು ಕಲಶ ಕಾರ್ಯಕ್ರಮವಿದೆ.

                       ದಂತಕಥೆಗಳೇನೇ ಇರಲಿ, ಊರ ಜನರ ವಿಧಿವತ್ತಾದ ಆಚರಣೆಗಳೇನೇ ಇರಲಿ, ಗುಹ್ಯ ಒಂದು ತೀರ್ಥ ಕ್ಷೇತ್ರವಂತೂ ಹೌದು. ಇಲ್ಲಿನ ಸುಂದರ ವಾತಾವರಣದ ಸವಿಯನ್ನುಂಡು ಕಾವೇರಿಯ ಭಕ್ತಿಯ ಅಲೆಯಲ್ಲಿ ಮಿಂದು ಉಲ್ಲಸಿತರಾಗಲು ಗುಹ್ಯ ಹೇಳಿ ಮಾಡಿಸಿದ ತಾಣವಾಗಿದೆ