Cauvery / TalaCauvery

  ಕಾವೇರಿಯ ಉಗಮಸ್ಥಾನ ತಲಕಾವೇರಿ:-

                        ಹಿಂದೆ ಬ್ರಹ್ಮಗಿರಿಯ ಬೆಟ್ಟದಲ್ಲಿ ಕವೇರನೆಂಬ ಮುನಿಯು ವಾಸವಾಗಿದ್ದನು. ಈ ಮುನಿಗೆ ತನಗೊಬ್ಬಳು ಪುತ್ರಿಬೇಕೆಂಬ ಅಭಿಲಾಷೆ ಉಂಟಾಗಿ ಅದಕ್ಕಾಗಿ ಆತ ಬ್ರಹ್ಮ ದೇವನನ್ನು ಕುರಿತು ತಪಸ್ಸು ಮಾಡಲಾರಂಭಿಸಿದರು. ತಪಸ್ಸಿಗೆ ಬಂದ ಬ್ರಹಮದೇವನನು ಕವೇರನಿಗೆ ಸಂತಾನಪ್ರಾಪ್ತಿ ಭಾಗ್ಯ ಇಲ್ಲವಾದ್ದರಿಂದ ತನ್ನ ಮಾನಸಪುತ್ರಿ ಲೋಪಾಮುದ್ರೆಯನ್ನು ದತ್ತು ಮಗಳಾಗಿ ನೀಡಿದರು. ಈ ರೀತಿ ಲೋಪಾಮುದ್ರೆಯು ಕವೇರನ ಮಗಳಾದ ನಂತರ ಆಕೆಗೆ ಕಾವೇರಿ ಎಂಬ ಹೆಸರು ಬಂತು.

                         ಕವೇರನ ಆಶ್ರಮವನ್ನು ಅದೊಂದು ದಿನ ಅಗಸ್ತ್ಯ ಮುನಿಗಳು ಪ್ರವೇಶಿಸಿದರು. ಲೋಪಾಮುದ್ರೆಯ ಅವತರಣದ ಮೂಲವನ್ನು ಗ್ರಹಿಸಿಸದ ಅಗಸ್ತ್ಯರು ಅವಳನ್ನು ವಿವಾಹವಾಗುವ ಇಚ್ಚೆಯನ್ನು ವ್ಯಕ್ತಪಡಿಸಿದರು. ತನ್ನನ್ನು ಉಪೇಕ್ಷಿಸಿ ಹೋಗಬಾರದು, ಹೋದರೆ ನಾನು ನದಿಯಾಗಿ ಹರಿದು ಸಮುದ್ರ ಸೇರುವೆ” ಎಂಬ ನಿಬಂಧನೆಯನ್ನು ಲೋಪಾಮುದ್ರೆ ಮುಂದಿರಿಸಿದಳು. ನಿಬಂಧನೆಗೆ ಒಪ್ಪಿದ ಅಗಸ್ತ್ಯರು ಲೋಪಾಮುದ್ರೆಯನ್ನು ವಿವಾಹವಾದರು.

                        ಕಾವೇರಿ-ಅಗಸ್ತ್ಯರ ವಿವಾಹವಾದ ಕೆಲವು ದಿನಗಳ ನಂತರ ಅದೊಂದು ದಿನ ಅಗಸ್ತ್ಯರು ತಾವು ವಾಸಿಸುತ್ತಿದ್ದ ಗುಡ್ಡಗಳ ಆಚೆ ಬದಿಯಲ್ಲಿ ಹರಿಯುತ್ತಿದ್ದ ಕನ್ನಕೆ ನದಿಯಲ್ಲಿ ಸ್ನಾನ ಮಾಡಿ ಬರಲು ಹೊರಡುತ್ತಾರೆ. ಕಾವೇರಿಯು ನಿದ್ದೆಯಲ್ಲಿರುವುದರಿಂದ ಆಕೆ ನಿದ್ದೆಯಿಂದ ಏಳುವುದರೊಳಗೆ ಹಿಂದಿರುಗುವ ಯೋಚನೆಯಿಂದ ಅಗಸ್ತ್ಯರು ಕಾವೇರಿಯನ್ನು ಒಬ್ಬಂಟಿಂಗಳಾಗಿ ಬಿಟ್ಟು ಆಶ್ರಮದಿಂದ ಹೊರಹೋಗುತ್ತಾರೆ. ಆದರೆ ಇದೇ ವೇಳೆಗೆ ನಿದ್ರೆಯಿಂದ ಎಚ್ಚೆತ್ತ ಕಾವೇರಿಯು ಅಗಸ್ತ್ಯರು ತನ್ನ ಬಳಿ ಇರದಿದ್ದುದನ್ನು ಕಂಡು, ತನ್ನ ಷರತ್ತು ಮೀರಿ ಅಗಸ್ತ್ಯರು ಹೊರ ಹೋದುದರಿಂದ ತಾನು ನದಿಯಾಗಿ ಹರಿಯಲು ಇದೇ ಪ್ರಶಸ್ತ ಸಮಯವೆಂದು ಭಾವಿಸಿ ಕಾವೇರಿಯು ಅಲ್ಲೇ ಇದ್ದ ಕೊಳದ ಬದಿಯ ಗುಂಡಿಯೊಂದರಲ್ಲಿ ಇಳಿದು ಅಲ್ಲಿಂದ ನೀರಿನ ರೂಪ ತಾಳಿ ಹರಿಯತೊಡಗುತ್ತಾಳೆ. ಕಾವೇರಿ ನೀರಾಗಿ ಹರಿಯುವುದನ್ನು ಕಂಡ ಅಗಸ್ತ್ಯರು ಶಿಷ್ಯ ವೃಂದ ಆಕೆಯನ್ನು ತಡೆಯಲು ಹೋದಾಗ ಕಾವೇರಿ ಅನತಿ ದೂರ ಗುಪ್ತಗಾಮಿನಿಯಾಗಿ ಹರಿಯತ್ತಾಳೆ.

                         ಈ ರೀತಿ ಬ್ರಹ್ಮ ಗಿರಿ ಪರ್ವತದಿಂದ ಇಳಿದ ಕಾವೇರಿ ಭಾಗಮಂಡಲ ತಲುಪುತ್ತಾಳೆ. ತನ್ನ ಉಗಮಸ್ಥಾನಕ್ಕೆ ಸಹಸ್ರಾರು ಭಕ್ತಾಧಿಗಳನ್ನು ಸೆಳೆದುಕೊಳ್ಳುವ ಕಾವೇರಿ ಮುಂದೆ ತಾನು ಸಾಗುವ ದಾರಿಯಲ್ಲಿ ಹಲವಾರು ರಮ್ಯ ತಾಣಗಳನ್ನು ನಿರ್ಮಿಸಿದ್ದಾಳೆ. ತಲಕಾವೇರಿಯಲ್ಲಿ ಉಗಮಗೊಂಡ ಕಾವೇರಿ ಕೊಡಗು ಜಿಲ್ಲೆಯ ಭಾಗಮಂಡಲ-ಹರಿಶ್ಚಂದ್ರ, ಬಲಮುರಿ, ಗುಹ್ಯ, ರಾಮಸ್ವಾಮಿ ಕಣಿವೆಗಳಲ್ಲಿ ಹರಿದು ಹಾಸನ ಜಿಲ್ಲೆಯನ್ನು ಪ್ರವೇಶಿಸುತ್ತಾಳೆ. ಕಾವೇರಿ ನದಿಯು ಶ್ರೀರಂಗಪಟ್ಟಣದಲ್ಲಿ ಇಬ್ಬಾಗವಾಗಿ ಹರಿದು ಶ್ರೀರಂಗಪಟ್ಟಣವನ್ನು ದ್ವೀಪವಾಗಿಸಿದ್ದಾಳೆ. ಇಲ್ಲಿಯೂ ಕಾವೇರಿಯ ಪವಿತ್ರ ಸಂಗಮವಿದೆ. ನಂತರ ಕೃಷ್ಣರಾಜ ಸಾಗರದಲ್ಲಿ ಸಹಸ್ರಾರು ವೀಕ್ಷಕರಿಗೆ ಮನೋಹರ ದೃಶ್ಯಗಳ ಸೊಬಗನ್ನು ಉಣಿಸಿ ತಿರಮಕೊಡ್ಲು, ನರಸೀಪುರ, ತಲಕಾಡುಗಳಲ್ಲಿ ಹರಿದು ಸಿವನ ಸಮುದ್ರದಲ್ಲಿ ಜಲಪಾತವಾಗಿ ಧುಮುಕುತ್ತಾಳೆ. ಈ ಜಲಪಾತ “ಗಗನ ಚುಕ್ಕಿ ಭರಚುಕ್ಕಿ” ಎಂದು ಪ್ರಸಿದ್ದಿಯಾಗಿದೆ. ಕರ್ನಾಟಕದಲ್ಲಿ ಮತ್ತಷ್ಟು ರಮಣೀಯ ತಾಣಗಳನ್ನು ನಿರ್ಮಿಸುವ ಕಾವೇರಿ ಸಹಸ್ರಾರು ಕೃಷಿಕರ ಜೀವನದಿಯಾಗಿ ಹರಿದು ತಮಿಳುನಾಡು ಸೇರುವ ಕಾವೇರಿ ತನ್ಮೂಲಕ ಎರಡೂ ರಾಜ್ಯಗಳ ಪವಿತ್ರ ನದಿ ಎನಿಸಿದ್ದಾಳೆ.

                         ಕಾವೇರಿಯು ಜಲರೂಪ ತಳೆದ ಆಕೆಯ ಉಗಮಸ್ಥಾನ ತಲಕಾವೇರಿಯಲ್ಲಿ ಪ್ರತಿವರ್ಷ ಅಕ್ಟೋಬರ್ ಹದಿನೇಳರಂದು ತೀರ್ಥೋದ್ಬವದ ಸಂಭ್ರಮ ತಲಕಾವೇರಿಯಲ್ಲಿನ ಪುಟ್ಟ ಕುಂಡಿಕೆಯಲ್ಲಿ ಮುಕ್ಕಾಲು ಭಾಗ ತುಂಬಿರುವ ನೀರು ತೀರ್ಥೋದ್ವವದ ದಿನ ಉಕ್ಕಿ ಹರಿಯುತ್ತದೆ. ದೈವ ಮಹಿಮೆಯ ಪ್ರತೀಕವಾದ ಈ ಅಪೂರ್ವ ನೋಟಕ್ಕಾಗಿ ಸಹಸ್ರಾರು ಭಕ್ತರು ಅಂದು ತಲಕಾವೇರಿಯಲ್ಲಿ ಕಾತರರಾಗಿರುತ್ತಾರೆ. 

                         ಸಮೂಹೂರ್ತಕ್ಕೆ ಸರಿಯಾಗಿ ತೀರ್ಥೋದ್ವವವಾದಾಗ ಅರ್ಚಕರು ಮಂತ್ರ ಘೋಷದಿಂದ ಕುಂಡಿಕೆಯಿಂದ ತೀರ್ಥವನ್ನು ತೆಗೆದು ಸುತ್ತಲೂ ನಿಂತಿರುವ ಭಕ್ತಾದಿಗಳ ಮೇಲೆ ಎರಚುತ್ತಾರೆ. ಭಕ್ತರು ಉತ್ಸಾಹ ಭರಿತರಾಗಿ ಕಾವೇರಿ ಮಾತೆಯನ್ನು ಸ್ತುತಿಸುತ್ತಾ ಸ್ನಾನಕೊಳದತ್ತ ಧಾವಿಸುತ್ತಾರೆ. ಕಾವೇರಿ ತೀರ್ಥೋದ್ವವವಾದ ಕೂಡಲೇ ತಲಕಾವೇರಿಯಲ್ಲಿ ಬಂದು ಸೇರಿರುವ ಸಹಸ್ರಾರು ಭಕ್ತರು ದೊಡ್ಡ ಕೊಳಕ್ಕೆ ನುಗ್ಗಿ ಪವಿತ್ರ ನೀರಿನಲ್ಲಿ ಮುಳುಗಿ ಪಾವನರಾಗುತ್ತಾರೆ. ಅತೀವ ಸಂಭ್ರಮದಿಂದ ಕಾವೇರಿ ತೀರ್ಥವನ್ನು ತುಂಬಿಕೊಂಡು ನಂತರ ಹಿಂತಿರುಗುವುದು ಆ ಸಂದರ್ಭದಲ್ಲಿ ಕಾಣುವ ದೃಶ್ಯ.

                        ತೀರ್ಥೋದ್ವವದ ಅಪೂರ್ವ ನೋಟವನ್ನು ವೀಕ್ಷಿಸಲು ಕೊಡಗಿನ ಮೂಲೆ ಮೂಲೆಗಳಿಂದ, ಕರ್ನಾಟಕ ವಿವಿಧ ಭಾಗಗಳಿಂದ ಹಾಗೂ ನೆರೆ ರಾಜ್ಯವಾದ ತಮಿಳು ನಾಡಿನಿಂದ ಬರುವ ಭಕ್ತ ಸಮೂಹದಿಂದ ಪ್ರಶಾಂತ ತಾಣವೆನಿಸಿದ ತಮಿಳು ನಾಡಿನಿಂದ ಬರುವ ಭಕ್ತ ಸಮೂಹದಿಂದ ಪ್ರಶಾಂತ ತಾಣವೆನಿಸಿದ ತಲಕಾವೇರಿ ತುಂಬಿ ತುಳುಕುತ್ತದೆ. ಕಾವೇರಿಯ ದರ್ಶನಕ್ಕಾಗಿ ಬಂದ ಭಕ್ತರು ಕಾವೇರಿಯ ನೀರಿನಲ್ಲಿ ಮಿಂದು ಪುನೀತರಾಗುತ್ತಾರೆ.

                        ಕಾವೇರಿ ಜಾತ್ರೆಯ ಸಂದರ್ಭದಲ್ಲಿ ಮಡಿಕೇರಿ, ವೀರಾಜಪೇಟೆ ಮುಂತಾದ ಪ್ರಮುಖ ಸ್ದಳಗಳಿಂದ ತಲಕಾವೇರಿಗೆ ವಿಶೇಷ ಬಸ್ ವ್ಯವಸ್ದೆ ಇದೆ. ಆದರೆ ತೀರ್ಥೋದ್ವವದ ಆ ಕ್ಷಣಕ್ಕಾಗಿ ಕಾತರಿಸುವ ಜನಸ್ತೋಮದ ನಡುವೆ ನಿಮಗೆ ತಲಕಾವೇರಿಯ ನೈಜ ಸೌಂದರ್ಯ ಅನುಭವಿಸುವುದು ಅಸಾಧ್ಯವಾಗುವುದುಂಟು.

                       ತಲಕಾವೇರಿಯ ಸುತ್ತಮುತ್ತ ಮತ್ತು ಭಾಗಮಂಡಲದಿಂದ ತಲಕಾವೇರಿಗೆ ತೆರಳುವಾಗ ಕಂಡು ಬರುವ ನಿಸರ್ಗನೋಟ ಅತ್ಯಂತ ಸುಂದರ, ರಮಣೀಯ. ತಲಕಾವೇರಿಯ ಸುಂದರ ದೃಶ್ಯಗಳು ಎಂದೂ ಮನದಿಂದ ಮರೆಯಾಗಲಾರವು. ಭಾಗಮಂಡಲದಿಂದ ತಲಕಾವೇರಿಗೆ ಸಾಗುವಾಗ ಸಿಗುವ ‘ಭೀಮನಕಲ್ಲು’ ‘ಸಲಾಂ ಕಟ್ಟೆ’ ಎಂಬ ಐತಿಹಾಸಿಕ ಬೆಡಗಿನ ತಾಣಗಳು, ಬ್ರಹ್ಮ ಗಿರಿ ಶಿಖರದ ಒಂದು ಪಾಶ್ರ್ವದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಸ್ದಾಪಿಸಿ, ತಿರುಗದ ಗಾಳಿಯಂತ್ರಗಳು ಹೀಗೆ ಹತ್ತು ಹಲವು ನೋಟಗಳ ತಾಣ ತಲಕಾವೇರಿ.


auto
home stay
home stay 1