Omkareshwara Temple Madikeri

ಮಡಿಕೇರಿಯ ಓಂಕಾರೇಶ್ವರ ದೇವಾಲಯ

                          ಮಡಿಕೇರಿ ನಗರ ಪ್ರವೇಶವಾಗುವಲ್ಲಿಯೇ ಇಳಿದು ಕಾಲ್ನಡಿಗೆಯಲ್ಲಿ ಅನತಿ ದೂರದಲ್ಲಿ ಸಾಗಿದರೆ ಈ ಸಂದರ ದೇವಾಲಯ ಕಾಣಸಿಗುತ್ತದೆ. ಹಿಂದೆ ಕೊಡಗನ್ನು ಆಳುತ್ತಿದ್ದ ಅರಸ ಲಿಂಗರಾಜ ಕಾಶಿಯಿಂದ ಲಿಂಗವನ್ನು ತರಿಸಿ ಕ್ರಿ. ಶ. 1820 ರಲ್ಲಿ ನಿರ್ಮಿಸಿದ ಈ ದೇಗುಲ, ಕೊಡಗಿನ ಅರಸರ ಕಾಲದಲ್ಲಿ ಕಂಗೊಳಿಸಿ ಅರಸು ಮನೆತನದ ವೈಭವವನ್ನು ಈಗಲೂ ಸಾರಿತ್ತದೆ. ಲಿಂಗರಾಜನು ಬ್ರಾಹ್ಮಣ ಹತ್ಯಾದೋಷದಿಂದ ವಿಮುಕ್ತನಾಗಲು ಕಟ್ಟಿಸಿದ ದೇವಾಲು ಇದೆಂದು ಪ್ರಚಲಿತದಲ್ಲಿರುವ ಕಥೆಯೊಂದು ಹೇಳುತ್ತದೆ.
ಒಳಾವರಣ: 
                              ಪ್ರಶಾಂತ ವಾತಾವರಣದಲ್ಲಿ ಈ ದೇವಾಲಯದ ಒಳಹೊಕ್ಕುವರು ಬೆರಗಾಗುವಂತೆ, ನಡುಭಾಗದಲ್ಲಿಹೊನ್ನ ಬಣ್ಣದ ಕಳಸವಿರುವ ವೃತ್ತಾಕಾರದ ಶಿಖರವಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ನಿತ್ಯ ಪೂಜೆ ಸಲ್ಲಿಸಲಾಗುತ್ತದೆ.ನಾಲ್ಕು ಮೂಲೆಗಳಲ್ಲಿ ನಂದಿಯ ಶಿಲ್ಪಗಳೊಂದಿಗೆ ನಾಲ್ಕು ವಿಶಿಷ್ಟ ವಿನ್ಯಾಸದ ಮಿನಾರುಗಳಿದ್ದು ಮಸೀದಿಯ ಹೋಲಿಕೆ ಕಂಡುಬಂದಾಗ ಪ್ರವಾಸಿಗರು ಅರೆಕ್ಷಣ ಬೆರಗಾಗುತ್ತಾರೆ. ಹಾಂ ! ಅಚ್ಚರೆ ಪಡದಿರಿ ! ಅದೇ ಓಂಕಾರೇಶ್ವರ ದೇವಾಲಯದ ವೈಶಿಷ್ಟ್ಯ. ಕ್ರಿ. ಶ. 1820 ರಲ್ಲಿ ಲಿಂಗರಾಜೇಂದ್ರ ಕಟ್ಟಿಸಿದಂತಹ ಓಂಕಾರೇಶ್ವರ ದೇವಾಲಯವು ನಿಜಕ್ಕೂ ವಿನೂತನವಾದ ರಚನೆ ಆಗಿದೆ. ಇಸ್ಲಾಂ ಮತ್ತು ರೋಮನ್ ವಾಸ್ತುಶಿಲ್ಪಗಳ ಪ್ರಭಾವವಿರುವ ಹಿಂದು ದೇವಾಲಯ ಎಂಬ ಖ್ಯಾತಿ ಇದಕ್ಕಿದೆ.
                               ದೇವಾಲಯದ ಮುಂಭಾಗ ವಿಶಾಲವಾಗಿದೆ. ಅಲ್ಲಿನ ವಿಶಾಲ ಪ್ರಾಂಗಣದಲ್ಲಿ ಕುಳಿತು ಸಂಜೆಯ ಹೊತ್ತು ಕಳೆಯುವುದೆಂದರೆ ಬಹಳ ಮಂದಿಗೆ ಪ್ರಿಯವಾದ ಕೆಲಸ. ನಡುವೆ ಒಂದು ಸುಂದರವಾದ ಕೊಳವಿದೆ. ಮಧ್ಯಭಾಗದಲ್ಲಿ ಉತ್ಸವ ಮಂಟಪವಿದ್ದು, ಕೇವಲ ಒಂದು ಬದಿಯಿಂದ ಮಾತ್ರ ಅದಕ್ಕೆ ಸೇತುವೆಯನ್ನು ಅಳವಡಿಸಲಾಗಿದೆ. ದೇವಾಲಯದ ಈ ಕೊಳ ಆಕರ್ಷಣೀಯವಾಗಿದ್ದು ಅಮೃತಸರದ ಸುವರ್ಣ ದೇವಾಲಯವನ್ನು ನೆನಪಿಗೆ ತರುತ್ತದೆ.  ಕೊಳದಲ್ಲಿ ಹಲವು ಬಣ್ಣ ಬಣ್ಣದ ಮೀನಿಗಳಿವೆ. ಅವುಗಳಿಗೆ ಪುರಿ, ಕಡಲೆಕಾಯಿ ಮುಂತಾದ ತಿನಿಸುಗಳನ್ನು ನೀಡಿದಾಗ ಅವು ಮೇಲಕ್ಕೆ ಜಿಗಿಯುವ ದೃಶ್ಯ ಮನಮೋಹಕ. ಈ ದೃಶ್ಯ ನೋಡಲೆಂದೇ ಹಲವಾರು ಸಂಜೆಯ ವೇಳೆಗೆ ದೇವಾಲಯದತ್ತ ಸಾಗುತ್ತಾರೆ. ಇತ್ತೀಚೆಗೆ ಕೊಡಗು ದೇವಸ್ದಾನಗಳ  ಆಡಳಿತ ಮಂಡಳಿಯವರು ಕೊಳದ ಸುತ್ತ ಕಬ್ಬಿಣದ ಸರಳಿನ ಬಲಿಷ್ಠ ಬೇಲಿ ಹಾಕಿದ್ದಾರೆ. ಹಾಗೆಂದು ಪುಷ್ಕರಣಿಯ ಸೌಂದರ್ಯಕ್ಕೇನೂ ಅಡ್ಡಿಯಾಗಿಲ್ಲ. ತೀರಾ ಇತೀಚಿನವರೆಗೂ ಜೀವನದಲ್ಲಿ ಜಿಗುಪ್ಸೆ ಹೊಂದಿದವರು ಕೊಳದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದುದರಿಂದ ಕೊಳದ ಸುತ್ತ ಈ ರೀತಿಯ ಬೇಲಿ ಹಾಕಿಸುವುದು ಅನಿವಾರ್ಯವಾಯ್ತು ಎಂಬ ಅಭಿಪ್ರಾಯವನ್ನು ದೇವಸ್ದಾನದ ಆಡಳಿತ ಮಂಡಳಿಯವರು ವ್ಯಕ್ತಪಡಿಸುತ್ತಾರೆ. ಹಿಂದೂ ಮುಸ್ಲಿಂ ವಾಸ್ತು ಶೈಲಿಯ ಈ ದೇವಾಲಯ ನಿರ್ಮಾಣಗೊಂಡ 180 ವರ್ಷಗಳಾಗಿವೆ. ಈ ಅವಧಿಯಲ್ಲಿ ಅದೆಷ್ಟೋ ಪ್ರವಾಸಿಗರ ಕಣ್ಮನ ತಣಿಸಿರುವ ಓಂಕಾರೇಶ್ವರ ದೇವಾಲಯ ಕೊಡಗಿನಲ್ಲಿ ವೀಕ್ಷಣೆಗೆ ಅರ್ಹವಾಗಿರುವ ತಾಣಗಳ ಪೈಕಿ ಅತ್ಯಂತ ಪ್ರಮುಖವಾದದ್ದು.

Related Information