Paadi Igguthappa Temple

ಪಾಡಿಯ ಇಗ್ಗುತ್ತಪ್ಪ ದೇವಾಲಯ:-

                                    ಪಾಡಿ ಇಗ್ಗುತ್ತಪ್ಪನಿಗೆ ಮಳೆದೇವರು ಎಂಬ ಖ್ಯಾತಿ. ಕೊಡಗಿನಲ್ಲಿ ಕೃಷಿಯನ್ನೇ ನಂಬಿ ಬದುಕುವ ಮಂದಿ ಮಳೆಗಾಗಿ ಪಾಡಿಯ ಇಗ್ಗುತ್ತಪ್ಪನನ್ನು ಪ್ರಾರ್ಥಿಸುತ್ತಾರೆ. ಮಳೆ ಹೆಚ್ಚಾಗಿ ಕೃಷಿಕಾರ್ಯಗಳಿಗೆ ಧಕ್ಕೆಯುಂಟಾಗುವ ಸೂಚನೆ ಕಂಡುಬಂದರೆ ಮಳೆ ಕಡಿಮೆಗೊಳಿಸಲೂ ಈತನಿಗೆ ಪ್ರಾರ್ಥನೆ ! ಕೊಡಗಿನ  ಈ ಮಳೆದೇವರಿಗೆ ಭವ್ಯ ಸೂರೊಂದನ್ನು ಬಹಳ ಹಿಂದೆಯೇ ನಿರ್ಮಿಸಲಾಗಿದ್ದು, ಅದು ಪಾಡಿ ಇಗ್ಗುತ್ತಪ್ಪನ ದೇವಾಲಯವೆಂದೇ ಪ್ರಸಿದ್ದಿ ಪಡೆದಿದೆ. ಕೊಡಗಿನ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಈ ದೇವಾಲಯಕ್ಕೆ ಅಗ್ರಸ್ಥಾನ.

                                   ಮಡಿಕೇರಿ ತಾಲೂಕಿನ ಕಕ್ಕಬ್ಬೆಯಿಂದ ಸುಮಾರು ಮೂರು ಕಿ.ಮೀ. ದೂರ ಸಾಗಿದರೆ ನಿಸರ್ಗದ ಚೆಲುವಿನಲ್ಲಿ ಕಂಗೊಳಿಸುವ ಇಗ್ಗುತ್ತಪ್ಪ ದೇವಾಲಯವನ್ನು ಸೇರಬಹುದು. ಸುತ್ತಲಿನ ನಿಸರ್ಗ ವೈಭವ, ಹಿನ್ನೋಟಕ್ಕೆ ರಮಣೀಯ ತಡಿಯಂಡಮೋಳು ಪರ್ವತ ಸಾಲುಗಳು ನಿಮ್ಮ ಮನಕ್ಕೆ ಮುದ ನೀಡುತ್ತದೆ. ಅಂತೆಯೇ ಗುಡ್ಡದ ತುದಿಯಲ್ಲಿ ಇಗ್ಗುತ್ತಪ್ಪನ ಪವಿತ್ರ ಸನ್ನಿಧಿ ಭಾವುಕರಿಗೆ ಭಕ್ತಿಯ ನೆಲೆಯಾಗಿ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.

                                  ಕಕ್ಕಬ್ಬೆ ಮಡಿಕೇರಿ ತಾಲೂಕಿಗೆ ಸೇರಿದ ಒಂದು ಪುಟ್ಟ ಊರು. ಇಲ್ಲಿಗೆ ತಕ್ಕಷ್ಟು ಖಾಸಗಿ ಬಸ್ ಸೌಲಭ್ಯವಿದೆ. ಆದರೆ ಇಲ್ಲಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ಪಾಡಿಗೆ ನೀವು ಹೋಗಬೇಕೆಂದಾದರೆ ಬಸ್ ಸೌಕರ್ಯ ತೀರಾ ಕಡಿಮೆ. ಒಂದೋ ಸ್ವಂತ ವಾಹನದಲ್ಲಿ ಇಲ್ಲವೇ ನಡೆದು ಸಣ್ಣ ಗುಡ್ಡವನ್ನು ಆರೋಹಣ ಮಾಡಬೇಕು. ಊರಿನ ಹೆಸರಾದ ಪಾಡಿಯಿಂದ ಪಾಡಿ ಇಗ್ಗುತ್ತಪ್ಪ ದೇವಾಲಯವೆಂದೆನಿಸಿರುವ ಈ ಪಾಡಿಬೆಟ್ಟಕ್ಕೆ ಇಗ್ಗುತ್ತಪ್ಪ ಬೆಟ್ಟ ಅಥವಾ ಸುಬ್ರಹ್ಮಣ್ಯ ದೇವರ ಬೆಟ್ಟವೆಂದು ಸ್ಥಳೀಯವಾಗಿ ಕರೆಯಲಾಗುತ್ತದೆ. ಗುಡ್ಡದ ಮೇಲಿರುವ ಈ ಭವ್ಯ ದೇವಾಲಯಕ್ಕೆ ಮೆಟ್ಟಿಲುಗಳ ಮೂಲಕ ಹತ್ತಿ ಹೋಗಬೇಕು.

ಇತಿಹಾಸದ ಹಿನ್ನಲೆ:-

                                ಕ್ರಿ.ಶ. 1810 ಕೊಡಗು ರಾಜರ ಆಡಳಿತದಲ್ಲಿದ್ದ ಸಮಯ. ಆಗ ಕೊಡಗನ್ನಾಳುತ್ತಿದ್ದ ಅರಸ ಲಿಂಗರಾಜೇಂದ್ರ ತನ್ನ ಸೈನಿಕರೊಂದಿಗೆ ಕಕ್ಕಬ್ಬೆಯ ಸಮೀಪದ ಬಲ್ಯಾಟ್ರ ಕಾಡಿಗೆ ಬೇಟೆಗಾಗಿ ಬಂದಿದ್ದ. ಸುತ್ತಲಿನ ಕಾಡನ್ನೆಲ್ಲಾ ಅಡ್ಡಾಡಿದರು ಯಾವ ಪ್ರಾಣಿಯೂ ಅರಸನ ಬೇಟೆಗೆ ಸಿಗಲಿಲ್ಲ್ಲ. ಸಂಜೆ ದಿವಾನ ಬೋಪು ಮತ್ತು ಸೈನಿಕರು ಶ್ರೀ ಇಗ್ಗುತ್ತಪ್ಪ ದೇವರನ್ನು ಸ್ಮರಿಸಿಕೊಂಡರು. ಬಲ್ಯಾಟ್ರ ಕಾಡಿಗೆ ಸಮೀಪದ ಬೆಟ್ಟದಲ್ಲಿದ್ದ ದೇವರ ಸನ್ನಿಧಿಯನ್ನು ನೆನಪಿಗೆ ತಂದುಕೊಂಡರು. ನಂತರ ಕಾಡಿನಲ್ಲಿ ಅಡ್ಡಾಡಿದಾಗ ದೈವಮಹಿಮೆಯಿಂದ ಹಲವು ಪ್ರಾಣಿಗಳು ಕಂಡುಬಂದವು. ಸಂತಸಗೊಂಡ ಲಿಂಗರಾಜೇಂದ್ರ ಅರಸ 34 ಆನೆಗಳನ್ನು ಕೊಂದು ಎಂಟು ಮರಿ ಆನೆಗಳನ್ನು ಕೈ ಸೆರೆಹಿಡಿದು ಅರಮನೆಗೆ ಹಿಂತಿರುಗಿದ. ಬೇಟೆಯ ಸಂದರ್ಭದಲ್ಲಿ ಅನಾಯಾಸವಾಗಿ ಆನೆಗಳ ಹಿಂಡು ದೊರಕಿದ ಬಗೆಗೆ ಕೃತಜ್ಞತೆ ಹಾಗೂ ಸಂತೋಷಭಾವದಿಂದ ಬೆಳ್ಳಿಯ ಆನೆವೊಂದನ್ನು ಶ್ರೀ ಇಗ್ಗತ್ತಪ್ಪ ದೇವರಿಗೆ ಲಿಂಗರಾಜೇಂದ್ರ ಅರಸನು ಕಾಣಿಕೆಯಾಗಿ ನೀಡಿದನು.

                               ಈ ರಮಣೀಯ ತಾಣಕ್ಕೆ ತೆರಳುವ ಪ್ರವಾಸಿಗರು ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿರವ ಬೆಳ್ಳಿಯ ಆನೆಯನ್ನು ಹಾಗೂ ಅದರ ಬೆನ್ನಮೇಲೆ ಅರಸ ಬರೆಸಿದ ಶಾಸನವನ್ನು ವೀಕ್ಷಿಸಬಹುದು.

               ಈ ದೇವಾಲಯದ ಗರ್ಭ ಗೃಹವು ಚೌಕವಾಗಿದ್ದು, ಒಳಗೆ ಪ್ರಾಚೀನ ಪಾಣಿಪೀಠದ ಮೇಲೆ ಇಗ್ಗುತ್ತಪ್ಪ ಶಿಲಾ ವಿಗ್ರಹವಿದೆ. ಬಲಬದಿಯಲ್ಲಿ ಶಾಸನವಿರುವ ಬೆಳ್ಳಿಯ ಆನೆ ಹಾಗೂ ಎಟಬದಿಯಲ್ಲಿ ಇಗ್ಗುತ್ತಪ್ಪನ ಉತ್ಸವ ಮೂರ್ತಿಯಿದೆ. ಮೂಲ ವಿಗ್ರಹಕ್ಕೆ ಅತ್ಯಂತ ಸೂಕ್ಷ್ಮ ಕೆತ್ತನೆಯುಳ್ಳ ಬೆಳ್ಳಿಯ ಪ್ರಭಾವಳಿ ಹಾಗೂ ಅದರ ಮೇಲ್ಬಾಗದಲ್ಲಿ ತನ್ನ ಐದು ಹೆಡೆ ಎತ್ತಿರುವ ಸುಂದರ ನಾಗಶಿಲ್ಪದ ಕೆತ್ತನೆಯಿದೆ. ಪಾಣಿಪೀಠದ ಮುಂಭಾಗದಲ್ಲಿ ಹಂಸ ಹಾಗೂ ಹೂಬಳ್ಳಿಗಳ ಕೆತ್ತನೆಯ ಸುದಂರ ಅಲಂಕಾರವಿರುವ ಬೆಳ್ಳಿಯ ತಗಡಿನ ಕವಚವು ಆಕರ್ಷಕವಾಗಿದೆ.

                         ಈ ಸುಂದರ ದೇವಾಲಯವು ಅಪ್ಪಾರಂಡ ಬೋಪು ಎಂಬ ದಿವಾನರಿಂದ ಕ್ರಿ.ಶ. 1834-35 ರ ಅವಧಿಯಲ್ಲಿ ನವೀಕರಿಸಲ್ಪಟ್ಟಿದ್ದು, ಅದೇ ಸಂದರ್ಭದಲ್ಲಿ ಗೋಪುರಕ್ಕೆ ಸುವರ್ಣ ಕಲಶವನ್ನು ಮಾಡಿಸಿದ ಬಗ್ಗೆ ಉಲ್ಲೇಖವಿದೆ

                  ವರ್ಷದ ಎಲ್ಲಾ ದಿನಗಳಲ್ಲೂ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಸೌಲಭ್ಯಗಳಿಗೂ ಕೊರತೆಯಿಲ್ಲ. ಉತ್ತಮ ನೀರಿನ ವ್ಯವಸ್ಥೆ ಉಂಟು. ಸುತ್ತಲಿನ ನಿಸರ್ಗ ಸೌಂದರ್ಯವನ್ನು ಸವಿದಷ್ಟೂ ಸಾಕೆನಿಸುವುದಿಲ್ಲ. ನಿತ್ಯ ದೇವಾಲಯಕ್ಕೆ ಆಗಮಿಸುವ ಭಕ್ತ ಸಮೂಹಕ್ಕೆ ಮಧ್ಯಾಹ್ನದ ಊಟದ ವ್ಯವಸ್ಥೆ ಉಂಟು.

                     ಇಲ್ಲಿನ ‘ಕಲ್ಲಡ ್ಚ ಹಬ್ಬ’ ತುಂಬ ಪ್ರಸಿದ್ಧ. ಮಾರ್ಚ್ ತಿಂಗಳಲ್ಲಿ ಆಚರಿಸಲ್ಪಡುವ ಈ ಹಬ್ಬ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತದೆ. ಹಬ್ಬದ ಸಂದರ್ಭದಲ್ಲಿ ಇಗ್ಗುತ್ತಪ್ಪನ ಕೃಪೆಯಿಂದ ತಕ್ಕಷ್ಟು ಮಳೆಯೂ ಆಗುತ್ತದೆ.  ಇಲ್ಲಿಗೆ ಸಮೀಪದ ನೆಲಜಿಪಾಡಿ ಎಂಬಲ್ಲಿ ಇಗ್ಗುತ್ತಪ್ಪ ದೇವರ ಸಹೋದರಿ ಪನ್ನಂಗಾಲತಮ್ಮೆಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ.

                    ಇಗ್ಗುತ್ತಪ್ಪ ಸನ್ನಿಧಿ, ಮಳೆದೇವರ ನೆಲೆ, ಸುಬ್ರಹ್ಮಣ್ಯ ಬೆಟ್ಟ ಮುಂತಾದ ಹೆಸರುಗಳಿಂದ ಕರೆಯಲಾಗುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ದೇಗುಲವು ಕಲೆ, ಪ್ರಕೃತಿ ಸೌಂದರ್ಯಗಳಿಂದ ಪ್ರಕೃತಿ ಪ್ರಿಯರನ್ನೂ, ದೈವಾರಾಧಕರನ್ನೂ ಕೈಬೀಸಿ ಕರೆಯುತ್ತದೆ. ಕಣ್ಮನ ಸೆಳೆಯುತ್ತದೆ.