Pete Sri Rama Mandira Madikeri

ಪೇಟೆ ಶ್ರೀ ರಾಮ ಮಂದಿರ:-

                             ನಗರದ ಬಸ್ ನಿಲ್ದಾಣದಿಂದ ಅನತಿ ದೂರದಲ್ಲಿ, ಕಾಲೇಜು ರಸ್ತೆ-ಹಿಲ್ ರಸ್ತೆ ಒಂದೆಡೆ ಸೇರುವಲ್ಲಿ ನಗರದ ಹೃದಯ ಭಾಗದಲ್ಲಿ ವಾಣಿಜ್ಯ ಮಳಿಗೆಗಳ ನಡುವೆ ಕಂಗೊಳಿಸುವ ದೇಗುಲವೇ ಪೇಟೆ ಶ್ರೀ ರಾಮ ಮಂದಿರ. ಇದರ ಇತಿಹಾಸವು ಮಡಿಕೇರಿ ದಸರದೊಂದಿಗೆ ಬೆಸೆದುಕೊಂಡಿದೆ. ಸುಮಾರು 180 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ತಲೆದೊರಿದ್ದ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಕರಗಗಳನ್ನು ಹೊರಡಿಸುವ ನಿರ್ಧಾರವನ್ನು ಧಾರ್ಮಿಕ ಮುಖಂಡರು ಕೈಗೊಂಡರು. ಊರ ಹೊರಗಿರುವ ಶಕ್ತಿ ದೇವತೆಗಳನ್ನು ಊರ ಒಳಗೆ ಕರೆದು ನಗರ ಪ್ರದಕ್ಷಿಣೆ ಮಾಡಿಸುವುದು ಕ್ರಮಬದ್ಧವಾಗಿರಬೇಕು, ಪೌರಾಣಿಕ ಹಿನ್ನಲೆಯಿಂದ ಕೂಡಿರಬೇಕು ಎಂಬ ಭಾವನೆ ಮೂಡಿತು. ಆಗ ಪಾರ್ವತಿಯು ದುಷ್ಟ ಸಂಹಾರಕ್ಕೆ ಮುನ್ನ ಮೊದಲಿಗೆ ಅಣ್ಣನೆನಿಸಿಕೊಂಡ ಶ್ರೀ ಮಹಾವಿಷ್ಣುವಿನ ಬಳಿಗೆ ಹೋಗುವ ಪೌರಾಣಿಕ ಘಟನೆಯನ್ನು ಹಿನ್ನಲೆಯಾಗಿರಿಸಿ ಕೊಂಡು, ಪಾರ್ವತಿಯ ಅಂಶವೆನಿಸಿಕೊಂಡಿರಿವ ನಾಲ್ಕು ಶಕ್ತಿ ದೇವತೆಗಳನ್ನು ಊರೊಳಗೆ ಮಹಾವಿಷ್ಣುವಿನ ಸ್ಥಾನಕ್ಕೆ ಬರಮಾಡಿಕೊಳ್ಳುವ ಕ್ರಮವಿಧಿಗಳನ್ನು ರೂಪಿಸಲಾಯಿತು.

                            ಆಗಿನ ಕಾಲದಲ್ಲಿ ನಗರದಲ್ಲಿ ಮಹಾವಿಷ್ಣುವಿಗೆ ಸಂಬಂಧಿಸಿದ ಯಾವುದೇ ಪೂಜಾಸ್ಥಳ ವಿರದ ಕಾರಣ ನಗರದ ದೊಡ್ಡ ಪೇಟೆಯಲ್ಲಿ ಪೂಜಾ ಸ್ಥಳವೊಂದನ್ನು ನಿರ್ಮಿಸಿ ರಾಮನ ಚಿತ್ರಪಟವನ್ನಿಟ್ಟು (ಇದನ್ನು ಇಂದಿಗೂ ದೇಗುಲದಲ್ಲಿ ಕಾಣಬಹುದು) ಪೂಜಿಸಲಾಯಿತು. ಅಲ್ಲದೇ ನವರಾತ್ರಿ ಸಂದರ್ಭ ಕರಗ ದೇವತೆಗಳು ಇಲ್ಲಿಗೆ ಆಗಮಿಸಿ ರಾಮ (ಅರ್ಥಾತ್ ಮುಹಾವಿಷ್ಣು) ನಿಗೆ ಪೂಜೆ ಸಲ್ಲಿಸಿ ತಮ್ಮ ನಗರ ಪ್ರದಕ್ಷಿಣೆ ಕಾರ್ಯವನ್ನು ಆರಂಭಿಸಿದ್ದವು. ಈ ಸಂಪ್ರದಾಯವು 180 ವರ್ಷಕಳೆದರೂ ಇಂದಿಗೂ ಹಾಗೆಯೇ ಮುಂದುವರೆಯುತ್ತಾ ಬಂದಿದೆ. (ಮಹಾ ಯುದ್ದ, ತುರ್ತು ಪರಿಸ್ಥಿತಿಯಂತ ಸಂದರ್ಭದಲ್ಲೂ ಈ ಸಂಪ್ರದಾಯಕ್ಕೆ ಧಕ್ಕೆ ಬರಲಿಲ್ಲ ಎಂಬದೊಂದು ವಿಶೇಷ)

                           ಹೀಗೆ ದಸರಾ ಉತ್ಸವಾಚರಣೆಗೊಂದು ನಿರ್ಮಾಣವಾದ ರಾಮ ದೇಗುಲವೂ ಕ್ರಮೇಣ ಪ್ರಸಿದ್ಧಿ ಪಡೆಯುತ್ತಾ ಬಂದಿತು. ಪೂಜಾ ಕಾರ್ಯಗಳು, ಭಜನೆ, ಸಮಾರಂಭಗಳು ಏರ್ಪಡುತ್ತಿದ್ದವು. ರಾಮಮಂದಿರ ಜೊತೆಗೆ ಗಣಪತಿಯ ಪ್ರತಿಷ್ಠಾಪನೆಯೂ ಆಯಿತು. ಮಂದಿರದ ದೇಖಾರೇಖಿಯ ಜವಾಬ್ದಾರಿಯನ್ನು ನಾಯ್ಡು ಮತ್ತು ಮೊದಲಿಯಾರ್ ಕುಟುಂಬಸ್ಥರು ನಡೆಸುತ್ತಾ ಬಂದಿ ತ್ತಾರೆ. 1967 ರಲ್ಲಿ ದೇಗುಲದ ಗೋಪುರ ನಿರ್ಮಾಣವಾಯಿತು. 1942 ರಲ್ಲಿ ಇಲ್ಲಿನ ಭಕ್ತಾದಿಗಳೊಬ್ಬರು ಸಮರ್ಪಿಸಿದ ಬುದ್ದನ ವಚಿಗ್ರಹ ಇಲ್ಲಿನ ಆಕರ್ಷಣೆಗಳಲ್ಲೊಂದು. ದೇಗುಲದ ಮುಂಭಾಗಸದಲ್ಲಿ ಸ್ಥಾಪಿತವಾಗಿರುವ ಈ ವಿಗ್ರಹ ಸಂಪೂರ್ಣ ಅಮೃತಶಿಲೆಯಲ್ಲಿ ನಿರ್ಮಿಸಲ್ಪಟ್ಟಿದ್ದು. ರಂಗೂನ್ ನಿಂದ ತರಲಾದ ಈ ವಿಗ್ರಹವನ್ನು ನೋಡಲೆಂದೇ ಟಿಬೆಟಿಯನ್ನರು ಮತ್ತು ನೇಪಾಳಿಯನ್ನರು ಆಗಮಿಸುವುದುಂಟು. ಈಪುರಾತನ ದೇಗುಲದಲ್ಲಿ ಇಂದಿಗೂ ಶ್ರೀ ರಾಮನ ವಿಗ್ರಹ ಪ್ರತಿಷ್ಠಾಪನೆ ನಡೆಯದಿರುವುದೊಂದು ಅಚ್ಚರಿಯು ವಿಷಯ. ಹಿಂದೆ ಈ ದೇವಾಲಯದಲ್ಲಿ ಶಿವಲಿಂಗವೂ ಇತ್ತು. ಪ್ರಸ್ತುತ ದೇಗುಲವು ಆಡಳಿತ ಮಂಡಳಿಯವರ ಮುತುವರ್ಜಿಯಿಂದ ದೇಗುಲ ಹೊಸರೂಪುಪಡೆಯುತ್ತಿದೆ. ನವಗ್ರಹ ಪ್ರತಿಷ್ಠಾಪನೆಯೂ ಆಗಿದೆ.

                           ದೇಗುಲದಲ್ಲಿ ಸಂಪೂರ್ಣ ನವೀಕರಣದ ಚಿಂತನೆಯೂ ನಡೆದಿದೆ. ದಸರಾ ಇಲ್ಲಿನ ಪ್ರಮುಖ ಉತ್ಸವ. ವಿಜಯದಶಮಿಯಂದು ಇಲ್ಲಿ ಪೂಜಿಸಲ್ಪಟ್ಟ ಕಳಶ ಮೆರವಣಿಗೆ ಹೊಡುವುದರೊಂದಿಗೆ ದಸರಾದ ಅಧಿಕೃತ ಆರಂಭ. ಅಲ್ಲಿಂದ ನಾಲ್ಕು ಕರಗ ದೇವಾಲಯಗಳಿಗೆ ಸಾಗಿ, ಪೂಜೆ ಸ್ವೀಕರಿಸಿ ಕರಗಗಳೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿದು ದಸರಾ ಉತ್ಸವಕ್ಕೆ ಇತಶ್ರೀ ಹಾಡಲಾಗುತ್ತದೆ. ಸಾಂಪ್ರದಾಯಿಕ ಆಚರಣೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುವುದು. ಇದಲ್ಲದೇ ರಾಮನವಮಿ, ದೀಪಾವಳಿ ಮತ್ತು ಕೃಷ್ಣಜನ್ಮಾಷ್ಟಮಿಗಳನ್ನು ಪೇಟೆ ಶ್ರೀ ರಾಮ ಮಂದಿರದಲ್ಲಿ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತದೆ. ಇದಲ್ಲದೇ ನಿತ್ಯ ಪೂಜೆಯೊಂದಿಗೆ ಗಣೇಶೋತ್ಸವ, ಸ್ವಾಮಿ ಅಯ್ಯಪ್ಪ ಪೂಜೆ ಇನ್ನಿತರ ವಿಶೇಷ ಪೂಜೆಗಳು ಜರುಗುತ್ತಿರುತ್ತದೆ.


ad4
ad1
ad2
ad3
ad4
ad5
ad6
ad7
ad8
ad9
ad10
ad11
ad12
ad13

Related Information