Ayyangeri Sri Krishna Temple

 ಅಯ್ಯಂಗೇರಿಯ ಶ್ರೀ ಕೃಷ್ಣ ದೇವಾಲಯ:-

                            ನಡು ಬೇಸಿಗೆಯ ದಿನಗಳಲ್ಲಿ, ಸೂರ್ಯನ ಪ್ರಖರತೆ ಏರುತ್ತಾ ಹೋದಂತೆ ತಮ್ಮ ಕೃಷಿ ಭೂಮಿಯ ಉಳಿವಿಗಾಗಿ ಪೂಜೆ ಪುನಸ್ಕಾರ ಉತ್ಸವಗಳ ಮೂಲಕ ದೇವ-ದೆವಿಯರನ್ನು ಪೂಜಿಸುವುದು-ಪ್ರಾರ್ಥಿಸುವುದು ಕೊಡಗಿನ ಗ್ರಾಮಂತರ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.  ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಭಗವತಿ, ಭದ್ರಕಾಳಿ, ಈಶ್ವರ, ಮುತ್ತಪ್ಪ ಮುಂತಾದ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ಹಬ್ಬ ಆಚರಿಸಲಾಗುತ್ತದೆ. 

                           ಆದರೆ, ಮಡಿಕೇರಿಯಿಂದ ಸುಮಾರು 40 ಕಿಲೋ ಮೀಟರ್ ದೂರದ ಅಯ್ಯಂಗೇರಿ ಗ್ರಾಮದಲ್ಲಿ ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಚಿನ್ನತಪ್ಪ ಕೃಷ್ಣನ ಕೊಳಲಿನ ಹಬ್ಬ ವಿಶಿಷ್ಟ ಎನಿಸಿದೆ. ಕೊಡಗಿನ ಬೇರೆ ಯಾವ ಭಾಗದಲ್ಲಿಯೂ ಶ್ರೀ ಕೃಷ್ಣನ ದೇವಾಲುವಿಲ್ಲ. ಉತ್ಸವವೂ ಇಲ್ಲ. ಶ್ರೀಕೃಷ್ಣನದು ಎನ್ನಲಾಗಿರುವ ಕೊಳಲನ್ನು ಹಬ್ಬದ ಸಂದರ್ಭದಲ್ಲಿ ಹೊರತಂದು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಉಲ್ಲಾಸಗಳಿಂದ ನುಡಿಸಿ ಉತ್ಸವವನ್ನು ಆಚರಿಸಲಾಗುವುದು. ಈ ವಿಶಷ್ಟ ಹಬ್ಬಕ್ಕೆ ಕೊಡಗಿನ ಹಲವಾರು ಭಾಗಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಕೃಷ್ಣನ ಕೊಳಲಿನ ನಾದವನ್ನು ಆಲಿಸುತ್ತಾರೆ. 

                          ಮಡಿಕೇರಿಯಿಂದ ನಾಪೋಕ್ಲುವಿನ ಮೂಲಕ ಭಾಗಮಂಡಲಕ್ಕೆ ತೆರಳುವ ಮಾರ್ಗದಲ್ಲಿ ಅಯ್ಯಂಗೇರಿ ಸಿಗುತ್ತದೆ. ಇಲ್ಲಿಂದ ಭಾಗಮಂಡಲಕ್ಕೆ ಎಂಟು ಕಿಲೋಮೀಟರುಗಳ ಅಂತರ. ಸುತ್ತ ಆವರಿಸಿದ ಬೆಟ್ಟ ಸಾಲುಗಳು ಆ ಬೆಟ್ಟಗಳ ತಪ್ಪಲಿನಲ್ಲಿ ಒಂದಷ್ಟು ಗದ್ದೆ ಬಯಲು. ಅಲ್ಲೊಂದು ಇಲ್ಲೊಂದು ಬೆರಳೆಣಿಕೆಯಷ್ಟು ಮನೆಗಳು.

                            ಇಂತಹ ನೀರವ ನಿಶ್ಯಬ್ದ ತಾಣದಲ್ಲಿ, ವiರ್ಚ್ ತಿಂಗಳಲ್ಲೊಂದು ದಿನ ಶುಭ್ರ ನೀಲಾಕಾಶದಲ್ಲಿ ರವಿಯ ಹೊಂಗಿರಣಗಳು ಕಾನಿಸಿಕೊಳ್ಳುವ ಮೊದಲೇ ಸುತ್ತಮುತ್ತಲಿನ ತಾನಗಳಿಂದ ಬಂದು ಸೇರುವ ಭಕ್ತಾದಿಗಳು ಶ್ರೀಕೃಷ್ಣನ ಹಬ್ಬದ ಸಡಗರದಲ್ಲಿರುತ್ತಾರೆ. ಊರವರು ಹೆಸರಿಸುವಂತೆ ಇದು ಚಿನ್ನತಪ್ಪ ಹಬ್ಬ ಶ್ರೀ ಕೃಷ್ಣನ ಸುಂದರ ಹಬ್ಬಕ್ಕೆ ಏಕೆ ಈ ಹೆಸರು? ನೀವು ಪ್ರಶ್ನಿಸಿದರೆ ಊರವರಾರು ಉತ್ತರಿಸರು. ಕೃಷ್ಣನದು ಎನ್ನಲಾಗಿರುವ ಕೊಳಲನ್ನು ಬಲು ಸಂಭ್ರಮೋಲ್ಲಾಸಗಳಿಂದ ಪೂಜಿಸುವ ಈ ಮಂದಿ ಕೊಳಲನ್ನು ವಸ್ತ್ರದಿಂದ ಮುಚ್ಚಿಟ್ಟು ವೀಕ್ಷಕರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸುತ್ತಾರೆ. ಇಲ್ಲಿಗೆ ಆಚರಣೆಗಳಿಗೆ ಸಂಬಂಧಿಸಿದ ಚಿತ್ರಗಳನ್ನಾಗಲೀ ಕೊಳಲು ಚಿತ್ರವನ್ನಾಗಲೀ ನೀವು ತೆಗೆಯುವಂತಿಲ್ಲ. ಹಾಗೇನಾದರೂ ಕಣ್ಣಿಗೆ ಮಣ್ಣೆರಚಿ ಚಿತ್ರ ತೆಗೆವಿರೋ ಆಚಿತ್ರಗಳು ಬರುವುದೇ ಇಲ್ಲ ಎಂಬ ವಾದವನ್ನು ಊರವರು ಮಂಡಿಸುತ್ತಾರೆ. ಅಷ್ಟು ಮಾತ್ರವಲ್ಲ, ಹಳೆಯದಾದ ಮಸುಕಾದ ಒಂದೆರಡು ಚಿತ್ರಗಳನ್ನು ನಿಮ್ಮ ಮುಂದಿರಿಸಿ ಪುರಾವೆ ಒದಗಿಸುತ್ತಾರೆ. 

                           ಕೊಡಗಿನ ಪುಣ್ಯ ಸ್ಥಳವೆನಿಸಿದ ಈ ದೇವಾಲಯ ಇತರ ಎಲ್ಲಾ ದೇವಾಲಯಗಳಿಗಿಂತ ಭಿನ್ನವೂ  ವೈಶಿಷ್ಟ್ಯವೂ ಆಗಿದೆ. ಸಂಪ್ರದಾಯಸ್ಥ ಮನೆಯ ಒಂದು ಪಾಶ್ರ್ವವೇ ಈ ಪುಣ್ಯ ಸ್ಥಳ. ಕೊಳಲು ಧಾರಿ ಶ್ರೀಕೃಷ್ಣನ ವಿಗ್ರಹವು ಇಲ್ಲಿ ಶತಮಾನಗಳ ಹಿಂದೆಯೇ ಸ್ಥಾಪಿಸಲ್ಪಟ್ಟಿದ್ದು, ಅದಿನಿಂದ ಇಂದಿನವರೆಗೆ ನಿತ್ಯಪೂಜೆ ಸಲ್ಲುತ್ತಿದೆ. ವರ್ಷಕ್ಕೆ ಒಂದು ಸಾರಿ ಉತ್ಸವ ರೂಪದಲ್ಲಿ ಭಕ್ತಿಪೂರ್ವಕವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. 

                          ಪ್ರತಿವರ್ಷ ಬೆಳಗಿನ ಹಬ್ಬದೊಂದಿಗೆ ಆರಂಭಗೊಳ್ಳುವ ಉತ್ಸವ ಭಕ್ತರ ಸಮ್ಮುಖದಲ್ಲಿ ಧಾರೆ ಪೂಜೆ, ಪಟ್ಟಣಿ ಹಬ್ಬ ಹೀಗೆ ಹಂತಹಂತವಾಗಿ ಜರುಗುತ್ತದೆ. ಆರಂಭದ ದಿನ ಹೊತ್ತೇರುವ ಮೊದಲೇ ಬೆಳಗಿನ ಹಬ್ಬ ಮುಕ್ತಾಯಗೊಳ್ಳುತ್ತದೆ. ರಾತ್ರಿ ಕತ್ತಲಾವರಿಸಿದ ನಂತರ ಆರಂಭಗೊಳ್ಳುವ ಪೂಜೆ ಬೆಳಗಿನ ಬೆಳಗಿನ ಜಾವ ಎರಡು ಗಂಟೆಯವರೆಗೆ ಜರುಗುತ್ತದೆ. ಈ ಸಂದರ್ಭದಲ್ಲಿ ಹರಕೆಯನ್ನು ಸಲ್ಲಿಸಲಾಗುತ್ತದೆ. ಮರುದಿನ ಜರುಗುವ ಮುಖ್ಯ ಹಬ್ಬವನ್ನು ವೀಕ್ಷಿಸಲು ಅಸಂಖ್ಯಾತ ಭಕ್ತರು ಬಂದು ಸೇರುತ್ತಾರೆ. 

                             ದೇವಾಲಯದಿಂದ ಅನತಿ ದೂರದಲ್ಲಿರುವ ಅಶ್ವತ್ಥವೃಕ್ಷದ ಕೆಳಗೆ ಶ್ರೀಕೃಷ್ಣನನ್ನು ಪೂಜಿಸುವುದರೊಂದಿಗೆ ವಿಭಿನ್ನ ಸಾಂಸ್ಕøತಿಕ ಚಟುವಟಿಕೆಗಳೂ ಜರುಗುತ್ತವೆ. ಒಂದೊಂದು ಕುಟುಂಬದಿಂದ ಒಬ್ಬೊಬ್ಬ ಸ್ತ್ರೀ ಶ್ವೇತವಸ್ತ್ರ ಧರಿಸಿ ಹರಿವಾಣದಲ್ಲಿ ಹೂ-ಅಕ್ಕಿ-ದೀಪ ಹಿಡಿದು ಪಟ್ಟಣಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. 

                           ವಿವಿಧ ಸಂಪ್ರದಾಯಗಳ ನೆಲೆಬೀಡಾದ ಕೊಡಗಿನ ಗೊಲ್ಲ ಜನಾಂಗದವರು ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ಈ ಉತ್ಸವದಲ್ಲಿ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿರುವುದು ಶ್ರೀಕೃಷ್ಣನ ಕೊಳಲು. ಇದನ್ನು ಗೊಲ್ಲ ಜನಾಂಗದವರು ಉತ್ಸವದ ಸಂದರ್ಭದಲ್ಲಿ ಪೂಜಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಹೊರ ತೆಗೆಯಲಾಗುವ ಕೊಳಲನ್ನು ಮಧುರವಾಗಿ ಮೂರು ಸಲ ನುಡಿಸಲಾಗುತ್ತದೆ. ಈ ಇಂಪಾದ ಕೊಳಲು ಕರೆಯನ್ನು ಭಕ್ತರು ಆಸಕ್ತರಾಗಿರುತ್ತಾರೆ. 

                           ಬಾಹ್ಯ ಜಗತ್ತಿನ ಅಬ್ಬರ-ಆರ್ಭಟಗಳುಇಲ್ಲಿಗೆ ಇನ್ನೂ ತಲುಪಿಲ್ಲ. ಇತಂಹ ನೀರವತೆಯ ತಾಣದಲ್ಲಿ ಈಕೊಳಲು ಬಂದುದಾದರೂ ಹೇಗೆ?

                          ದಂತಕಥೆಯ ಪ್ರಕಾರ ಹಿಂದೆ ಶ್ರೀಕೃಷ್ಣನು ಸುತ್ತಲಿನ ಪರ್ವತಗಳ ತಪ್ಪಲಲ್ಲಿ, ವೃಕ್ಷಲತೆಗಳಿಂದ ಶೋಭಿತವಾದ ಈ ತಾಣದಲ್ಲಿ ವಾಸವಾಗಿದ್ದ. ಪ್ರತಿದಿನ ಮುಂಜಾನೆ ತಾಯಿ ಯಶೋಧೆ ಈತನಿಗೆ ಬಟ್ಟೆ ತೊಡಿಸಿ, ತಿಂಡಿಯನ್ನು ಕೊಟ್ಟು–“ಮಗುವೇ, ಮಂದೆಯನ್ನು ಮೇಯಿಸಲು ಕರೆದುಕೊಂಡು ಹೋಗು” ಎಂದು ಹೇಳುತ್ತಿದ್ದಳು. ಸ್ನೇಹಿತರೊಡನೆ ಶ್ರೀಕೃಷ್ಣನು ಗೋವುಗಳನ್ನು ಹೊಡೆದುಕೊಂಡು ಹೋಗುತ್ತಿದ್ದನು. ಜೊತೆಯಲ್ಲಿ ಬಲರಾಮನೂ ಇರುತ್ತಿದ್ದ. ಇಬ್ಬರು ಸಹೋದರರು ಕೊಳಲನ್ನು ಊದುತ್ತಾ ಸಂತೋಷದಿಂದ ಗೊಲ್ಲರ ಮಕ್ಕಳೊಡನೆ ಉತ್ಸಾಹದಿಂದ ವಿಹರಿಸುತ್ತಿದ್ದರು. ಈ ಪ್ರಶಾಂತ ವಾತಾವರಣದಲ್ಲಿ ಕೃಷ್ಣನು ಕೊಳಲಿನ ಮಾರ್ದನಿ ಪ್ರತಿಧ್ವನಿಸುತ್ತಿತ್ತು. ಕೆಲವು ವರ್ಷಗಳ ಬಳಿಕ ಶ್ರೀಕೃಷ್ಣ ಮಥುರೆಗೆ ಹೋಗಬೇಕಾಗಿ ಬಂದಾಗ ತನ್ನ ಮೆಚ್ಚಿನ ಕೊಳಲನ್ನು ಅಲ್ಲೇ ಬಿಟ್ಟು ಹೋದ. ಈ ಕೊಳಲನ್ನೇ ಜನ ಜೋಪಾನವಾಗಿ ಕಾಯ್ದಿರಿಸಿ ಪೂಜಿಸುತ್ತಾ ಬಂದರು.  ಮತ್ತೊಂದು ಅಭಿಪ್ರಾಯದ ಪ್ರಕಾರ ಅಲ್ಲೇ ಹರಿಯುವ ಹೊಳೆಯಲ್ಲಿ ಕೊಳಲು ತೇಲುತ್ತಾ ಬಂತು. ಅದನ್ನು ತೆಗೆದು ಗೊಲ್ಲರು ಈಗಿನ ದೈವ ನೆಲೆಯಲ್ಲಿ ಪ್ರತಿಷ್ಠಾಪಿಸಿದರು. 

        ಏನೇ ಇರಲಿ, ಶ್ರೀಕೃಷ್ಣನ ಸುಮಧುರ ಕೊಳಲ ಕೆರೆಯನ್ನು ನೀವಿಲ್ಲಿ ಉತ್ಸವದ ಸಂದರ್ಭದಲ್ಲಿ ಆಲಿಸಬಹುದು. ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ನಿತ್ಯ ಇಲ್ಲಿಗೆ ಆಗಮಿಸಿದ ಭಕ್ತರ ಸಂಖ್ಯೆಯೂ ಕಡಿಮೆಯೇನಿಲ್ಲ. ನೀಲವರ್ಣದ ಆಕಾಶದಲ್ಲಿ ಪ್ರಾತಃಕಾಲದ ಸೂರ್ಯನು ವಿರಾಜಮಾನನಾಗುತ್ತಲೆ ಇಲ್ಲಿ ಉತ್ಸವದ ರಂಗೇರುವುದು. ಬಂದ ಅತಿಥಿಗಳಿಗೆ ಅವಲಕ್ಕಿ ಉಪಹಾರ ಲಭ್ಯ. ಅಂದು ಗ್ರಾಮದ ಎಲ್ಲಾ ಮನೆಗಳಲ್ಲೂ ಅವಲಕ್ಕಿಯನ್ನು ಉಪಹಾರಕ್ಕೆ ಬಲಸಲಾಗುವುದು. (ಶ್ರೀ ಕೃಷ್ಣನ ಅವಲಕ್ಕಿ ಸ್ನೇಹಿತ ಸುಧಾಮನ ನೆನಪಲ್ಲಿ!)  ಇತಂಹ ವೈಶಿಷ್ಟ್ಯಪೂರ್ಣ ಹಬ್ಬದಲ್ಲಿ ಕೃಷ್ಣನ ಕೊಳಲಿನ ಕರೆ ಅಲೆ ಅಲೆಯಾಗಿ ತೇಲಿಬರುವುದು.   ಲೇಖಕರು:ಸಿ. ಎಸ್. ಸುರೇಶ್