Hosakeri Chilipili Temple

 ಹೊಸಕೇರಿ ಚಿಲಿಪಿಲಿ ಶ್ರೀ ಮಹದೇವರ ಸ್ಥಳ ಪುರಾಣ:

                            ಕೊಡಗಿನ ಪ್ರತೀ ಗ್ರಾಮದಲ್ಲಿ ಒಂದೊಂದು ದೇವಾಲಯವಿದೆ. ಹಾಗೆಯೇ ಕೊಡಗಿನ ಮಡಿಕೇರಿಯಿಂದ ಮುಂದಕ್ಕೆ ಸುಮಾರು ಇಪ್ಪತ್ತು ಕಿಲೋಮೀಟರು ದೂರದ  ಹೊಸಕೇರಿ ಎಂಬ ಗ್ರಾಮದಲ್ಲಿ ಒಂದು ಶಿವಾಲಯವಿದೆ. ಈ ಶಿವಾಲಯದ ಹೆಸರೇ ವಿಶೇಷ ಮತ್ತು ಅಪರೂಪ.  “ಶ್ರೀ ಚಿಲಿಪಿಲಿ ಮಹದೇವ” ಎಂದು ಕ್ಷೇತ್ರದ ಹೆಸರು   ಇದೊಂದು ವಿಶೇಷವಾದ ದೇವಾಲಯ. ಇಲ್ಲಿಯ ವೈಶಿಷ್ಟ್ಯವೇನೆಂದರೆ –ಎಲ್ಲ ದೇವ ಮಂದಿರಗಳಂತೆ ಈ ದೇವ ಮಂದಿರವಲ್ಲ. ಮಹಾ ಬಂಡೆ ಕಲ್ಲುಗಳೆರಡು ಕೂಡುವಿಕೆಯಿಂದಾಗುವ ಮಧ್ಯ - ಸಂಧಿಯೇ ದೇವಮಂದಿರಕ್ಕೆ ದಾರಿ ಹಾಗೂ ಹೆಬ್ಬಾಗಿಲು.   ಯಾರಿಗಾದರೂ ಒಮ್ಮೆಲೇ ನೋಡುವಾಗ ಭಯ ಹುಟ್ಟುತ್ತದೆ. ಗುಹೆಯಂತಹ ಈ ದಾರಿಯಲ್ಲಿ ಮುಂದೆ ಸ್ವಲ್ಪ ದೂರ ಹೋದರೆ ದೇವರನ್ನು ಕಾಣುತ್ತದೆ.  ಆದರೆ! ಇಲ್ಲಿ ಬ್ರಾಹ್ಮಣರೂ ಸಹಾ ಹಿಂದು ಮುಂದೂ ಯೋಚಿಸದೇ ಪ್ರವೇಶ ಮಾಡುವಂತಿಲ್ಲ. ಕಾರಣ – ಅಲ್ಲಿ, ಇಲ್ಲಿ ಶಂಕರನ ಆಭರಣಗಳಾದ ಸರ್ಪಗಳು ಕಾಣಸಿಗುತ್ತದೆ. ಅಶುದ್ಧಿ, ಸೂತಕವಿದ್ದರೆ ಬ್ರಾಹ್ಮಣರಿಗೂ ಪ್ರವೇಶವಿಲ್ಲ. ಹೋಗಬಾರದು ಕೂಡ.   ಈ  ಸ್ಥಳದಲ್ಲಿ ದೇವರನ್ನು ತಮಾಷೆ ಮಾಡುವಂತಿಲ್ಲ. ಹಾಸ್ಯ ಮಾಡಿದರೆ ಅದರ ಪರಿಣಾಮ ಶೀಘ್ರದಲ್ಲಿ ಕಾಣುತ್ತದೆ. 

                           ಯಾರಿಂದಲೇ ಆಗಲಿ ಮನನೊಂದಿದ್ದರೆ – ದೇವಾ, ಚಿಲಿಪಿಲೀಶಾ ನಿನಗೇ ಎಂದರೆ ಸಾಕು! ಕೆಲವೇ ಸಮಯದೊಳಗೆ ಮನನೋಯಿಸಿದವನ ಮನವಲ್ಲ ಶರೀರವೇ ನೋಯುವಂತೆಸಗುತ್ತಾನೆ. ಇಲ್ಲಿ ಬಂಡೆ ಕಲ್ಲಗಳ ಸಂಧಿದಾರಿಯಲ್ಲಿ ಒತ್ತೊಟ್ಟಿಗೇ ಜಲಧಾರೆ ಹರಿಯುತ್ತದೆ. ಈ ಜಲದ ಒರತೆ ಬಂಡೆಕಲ್ಲುಗಳೆಡೆಯಿಂದ ಬರುವುದು  ಈ ಜಲಧಾರೆಗೆ ಮೇಲಿನಿಂದ ಹರಿದು ಬರುವ ನೀರೂ ಸೇರಿಕೊಳ್ಳುವುದು. ಮೇಲಿಂದ ಹರಿದು ಬರುವ ನೀರು ಸಂಪೂರ್ಣ ನಿಂತರೂ ಸಹಾ ಈ ಜಲ ಮಾತ್ರ ಕಮ್ಮಿ ಆಗುವುದಿಲ್ಲ. 

                            ಶ್ರೀ ದೇವ ಸನ್ನಿಧಿಯಲ್ಲೇ ಈ ಜಲ ಹುಟ್ಟಿರುವುದರಿಂದ ಇದು “ಶ್ರೀ ಮಹೇಶ್ವರ ತೀರ್ಥ”ವಾಗಿದೆ. ಮಾತ್ರವಲ್ಲ, ಶಿವನ ಜಠೆಯಿಂದ ದುಮ್ಮುಕ್ಕುವ ಗಂಗಾ ಜಲವೂ ಆಗಿದೆ. ಈ ತೀರ್ಥದಲ್ಲಿ ಸ್ನಾನಮಾಡಿದರೆ ಸಾಕು, ಮಾಡಿದ ಸಕಲ ಪಾಪಗಳೂ ಹರವಾಗುವುದು. ತೀರ್ಥ ಸ್ನಾನದ ಫಲ ಸಿಗುವುದು. ದೇವತಾನುಗ್ರಹವಾಗುವುದು, ಬುದ್ಧಿ ಪ್ರಕಾಶವಾಗುವುದು. ಜ್ಞಾನ ವೃದ್ಧಿಸುವುದು.  ಇಲ್ಲಿಯ ಶ್ರೀ ದೇವರ ಗರ್ಭಗುಡಿ ಎಂದರೆ ಒಳಗೆ ಚೌಕಾಕೃತಿಯಾದ ಒಂದು ಎತ್ತರದ ಪೀಠಸ್ಥಳ. ಅಲ್ಲಿ ಉದ್ಭವ ಶ್ರೀ ಶಿವಲಿಂಗ. ಶ್ರೀ ದೇವರ ಬಲಭಾಗದಲ್ಲಿ ಶ್ರೀ ಗಣಪತಿ. ಶ್ರೀ ದೇವರ ಎಡ ಭಾಗದಲ್ಲಿ ಶ್ರೀ ಸುಬ್ರಹ್ಮಣ್ಯ ಶ್ರೀ ದೇವರ ಮುಂಭಾಗದಲ್ಲಿ ಶ್ರೀ ಬಸವೇಶ್ವರ. ಈ ರೀತಿ ದೇವರುಗಳ ಇರುವಿಕೆ. ಕೆಲವು ವರ್ಷಗಳ ಹಿಂದೆ ಈ ಶಿವಲಿಂಗಕ್ಕೆ ಮೇಲಿನಿಂದ ಜಲಧಾರೆ ಬೀಳುತ್ತಿತ್ತಂತೆ. ಈಗ ಜಲವೃಷ್ಟಿ ಕಮ್ಮಿ ಆದಂತೆ ಶಿವಲಿಂಗಕ್ಕೆ ಬೀಳುವ ಜಲಧಾರೆ ನಿಂತುಹೋಗಿದೆ. ಆದರೂ ಶಿವಲಿಂಗದ ಬಳಿ ಹರಿಯುವ ಜಲ ಸದಾ ಹರಿಯುತ್ತದೆ.ಹೊಸಕೇರಿ ಗ್ರಾಮದ ಜನರೇ ಈ ದೇವಸ್ಥಾನವನ್ನು ನಡೆಸುತ್ತಿರುವುದು. ಶ್ರೀ ದೇವರ ನಿತ್ಯ ಪೂಜೆಗೆ ಅರ್ಚಕರನ್ನು ನಿಯಮಿಸಿದ್ದಾರೆ. ಪ್ರತೀ ದಿನ ದೇವರಿಗೆ ಪೂಜೆ ಸಲ್ಲುತ್ತಿದೆ. ಬೆಳಗಿನಿಂದ ಮಧ್ಯಾಹ್ನದ ಒಳಗೆ ಇಲ್ಲಿಯ ಪೂಜಾ ಕಾರ್ಯಕ್ರಮಗಳು. 

                          ಅರ್ಚಕರಿಗೆ ವಾಸಕ್ಕೆ ಮನೆ ಕಟ್ಟಿಸಿ ಕೊಟ್ಟಿದ್ದಾರೆ. ಅರ್ಚಕರಿಗೆ ನಿಯಮಿತ ಸಂಬಳವನ್ನು ಕೊಡುತ್ತಿದ್ದಾರೆ. ಶ್ರೀ ಚಿಲಿಪಿಲಿ ಮಹದೇವರ ವಾರ್ಷಿಕೋತ್ಸವವು “ಮಹಾಶಿವರಾತ್ರಿ” ದಿನ ಮತ್ತು ಅದರ ಮಾರನೇ ದಿನ ನಡೆಯುವುದು. ತುಂಬಾ ಭಕ್ತಾಧಿಗಳು ಸೇರುವರು.   ಶಿವರಾತ್ರಿ ದಿನ ರಾತ್ರಿ ಹೊಸಕೇರಿ ಗ್ರಾಮದವರೆಲ್ಲರೂ ಹಾಗೂ ಶಿವಭಕ್ತಾಧಿಗಳು ದೇವಸ್ಥಾನಕ್ಕೆ ಬಂದು ಜಾಗರಣೆ ಇರುವುದು ಸಂಪ್ರದಾಯ. ಶಿವರಾತ್ರಯಂದು ಶ್ರೀ ಶಿವನಿಗೆ ಶ್ರೀ ರುದ್ರಾಭಿಶೇಕ, ಶ್ರೀ ಬಿಲ್ವಪತ್ರಾರ್ಚನಾದಿ - ವಿಶೇಷ ಪೂಜೆ, ಮಂಗಳಾರತಿ. ಪ್ರಸಾದ ವಿತರಣೆ ನಡೆಯುವುದು. ಭಕ್ತಾದಿಗಳು ದೂರ ದೂರದಿಂದ ಬಂದು ತಮ್ಮ ತಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವಂತೆ ಶ್ರೀ ಚಿಲಿಪಿಲೀಶನಲ್ಲಿ ಪ್ರಾರ್ಥಿಸುಕೊಳ್ಳುವರು. ಭಕ್ತಿ ಪೂಜೆ, ಹರಿಕೆ ಪೂಜೆ ನಡೆಸುವರು. ಭಕ್ತಿ ಕಾಣಿಕೆ ಹಾಕುವರು. ಹರಿಕೆ ಒಪ್ಪಿಸುವರು. 

                          ಭಕ್ತಿಯಿಂದ ಪ್ರಾರ್ಥಿಸಿಕೊಂಡವರಿಗೆ ಶ್ರೀ ಚಿಲಿಪಿಲಿ ಮಹದೇವನು ಅನುಗ್ರಹಿಸಿದ್ದಾನೆ. ರಕ್ಷೆಯನ್ನಿತ್ತಿದ್ದಾನೆ. ನಂಬಿದ ಭಕ್ತರನ್ನು ಸದಾ ಪೊರೆಯುವನು. ಯಾವುದೇ ದೇವ ಮಂದಿರದಲ್ಲಿ ದೇವರು ಮಾನವರಿಂದ ಪೂಜೆ ಮಾಡಿಸಿಕೊಂಡು. ಪೂಜಾ ನಂತರ ದೇವ ದೂತರಿಂದ ಹಾಗೂ ಶಿವೈಕ್ಯರಾದ ಮಹಾತ್ಮರಿಂದ ಪೂಜಿಸಿಕೊಳ್ಳುವನಂತೆ. ಅಂತಯೇ ಈ ಚಿಲಿಪಿಲೀಶನ ಆಲಯದೊಳಗಿನಿಂದ ಮಧ್ಯ ರಾತ್ರಿ ವೇಳೆ ಮಂತ್ರ ಘೋಷ ಕೇಳಿಸುವುದೆಂಬ ಪ್ರತೀತಿ ಇದೆ! ಈ ಚಿಪಿಲೀಶನ ಸ್ಥಾನದಲ್ಲಿ ಅಶುದ್ಧಿಯಾಗಿ, ಸೂತಕವಾಗಿ ಹೋದರೆ, ದೇವಸ್ಥಾನದ ದ್ವಾರದಲ್ಲಿ ಹೆಬ್ಬುಲಿಯು ಅಡ್ಡವಾಗಿ ಮಲಗಿರುತ್ತಿತ್ತಂತೆ!!

                       ಅರ್ಚಕರನ್ನು ಪೂಜೆ ಮಾಡಲು ಒಳಗೆ ಹೋಗಲು ಬಿಡುತ್ತಿರಲಿಲ್ಲವಂತೆ. ಆನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಶುದ್ಧೀಕರಿಸಿದ ನಂತರ ಹುಲಿಯು ಅದೃಶ್ಯವಾಗುತ್ತಿತ್ತಂತೆ. ಹೀಗೆಂದು, ಇಲ್ಲಿಯ ಹಿರಿಯರ ಅಂಬೋಣ. ಮಹಾಶಿವರಾತ್ರಿಯ ಮಾರನೇ ದಿನ ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ ಬಂದ ಭಕ್ತಾಧಿಗಳಿಗೆ ಉಟೋಪಚಾರ ನಡೆಯುವುದು. ಆನಂತರ ಊರವರು ಭಂಡಾರ ಲೆಕ್ಕ ಮಾಡುವರು, ಮುಂದಿನ ವರ್ಷದ ವ್ಯವಸ್ಥೆ ಮಾಡುವರು. ಹರ್ಷಚಿತ್ತರಾಗಿ ಭಕ್ತಿ ಪರವಶೆಯಿಂದ ತಮ್ಮ ತಮ್ಮ ಮನೆಗಳಿಗೆ ತೆರಳುವರು. 

                        ಈ ದೇವಸ್ಥಳವು ಬಹಳ ಕಾರ್ಣಿಕೆಯುಳ್ಳದ್ದಾಗಿದೆ. ಶ್ರೀ ಚಿಲಿಪಿಲೀಶನನ್ನು ನಂಬಿದವರಿಗೆ ಇಷ್ಠರ್ಥ ಸಿದ್ಧಿ, ಸಂಪತ್ತು ವೃದ್ಧಿ ಆಗುವುದು. ದಾರಿದ್ರ್ಯತೆ ಬರದು, ಭಯವಿರದು. ಎಲ್ಲಾ ದೇವಸ್ಥಳಗಳಂತೆ ಈ ದೇವ ಸ್ಥಳವೂ ಬಹಳ ಆಕರ್ಷಣೀಯವಾಗಿದೆ. ಮತ್ತು ಮಹಿಮಾಪೂರ್ಣವಾಗಿದೆ. ಶಾಂತಿಯುತವಾಗಿದೆ. ಆ ಸ್ಥಳಕ್ಕೆ ಹೋದಾಗಲೆಲ್ಲಾ ಮನ್ಹಶ್ಯಾಂತಿಯುಂಟಾಗುತ್ತದೆ.  

ಈ ಚಿಲಿಪಿಲಿ ಮಹದೇವರ ಕ್ಷೇತ್ರವು ಹೇಗುಂಟಾಯ್ತು?

                “ಚಿಲಿಪಿಲಿ” ಎಂಬ ಹೆಸರು ಹೇಗೆ ಬಂತು ? ಇದರ ಹಿನ್ನಲೆ ಏನು? ಎಂಬುದಕ್ಕೆ ಸಾಮಾನ್ಯ ವಿವರ ಹೀಗಿದೆ. ಇಲ್ಲಿಯ ಕೆಲವು ಜನ ಹಿರಿಯರ ಅಂಬೋಣದಂತೆ, ಮಹಾಕಾಡು ಪ್ರದೇಶವಾಗಿದ್ದ ಈ ಸ್ಥಳಕ್ಕೆ ನೂರಾರು ವರ್ಷಗಳ ಹಿಂದೆ ಮಹಾ ದೈವಜ್ಞನಾದ ಒಬ್ಬ ಪುರುಷನು ಭಕ್ತಿ ಭಾವದಲ್ಲಿ ಶಿವನನ್ನು ಕುರಿತು ತಪಸ್ಸು ಮಡುವುದಕ್ಕೆ ಉತ್ತಮವಾದ ಸ್ಥಳವೆಲ್ಲಿದೆಯೆಂದು ಸ್ಥಳ ವನ್ನರಸುತ್ತಾ ಈ ಪ್ರದೇಶಕ್ಕೆ ಬಂದನು. 

                   ಮಹಾ ಕಾರ್ಗತ್ತಲೆಯಿಂದ ಕೂಡಿದ ಈ ಸ್ಥಳಕ್ಕೆ ಬರುವಲ್ಲಿ ಸಣ್ಣದಾದ ನೀರಿನ ತೊರೆಯನ್ನೂ, ಸುತ್ತು – ಮುತ್ತು ಮರ ಕಾಡುಗಳನ್ನೂ, ಬಂಡೆ ಕಲ್ಲುಗಳನ್ನೂ ಕಂಡನು ಹಾಗೂ ಕಿವಿಗಿಂಪಾದ ಪಕ್ಷಿಗಳ “ಚಿಲಿಪಿಲಿ” ನಾದ ಸ್ವರಗಳನ್ನು ಕೇಳಿದನು. ಮನಸ್ಸಿಗೆ ಹರ್ಷವಾಯ್ತು. ಶಾಂತಿಯುಂಟಾಯ್ತು. ಈ ಸ್ಥಳವು ಪರಮ ಪವಿತ್ರ ಸ್ಥಳವು ಎಂಬುದಾಗಿ ಆಚೀಚೆ ಕಣ್ಣಾಡಿಸುತ್ತಿರುವಾಗ ಹೆಬ್ಬಂಡೆಗಳೆರಡು ಕೂಡಿಕೊಂಡ ಸಂಧಿಯೊಂದು ಗೋಚರಿಸಿತು ಆ ಮಹಿಮೆಗೆ. 

                  ಸಂಧಿ ದಾರಿಯಿಂ ಗುಹೆಯನ್ನು ಪ್ರವೇಶಮಾಡಿದನು. ಅಲ್ಲಿದ್ದ ಚೌಕಾದ ತಟ್ಟು ಸ್ಥಳವನ್ನು ಕಂಡನು. ಗುಹೆಯೊಳಗೆ ನೇತಾಡುತ್ತಿರುವ ಬಾವಲಿ ಪಕ್ಷಿಗಳು, ಹರಿದಾಡುವ, ಬುಸುಗುಟ್ಟುವ, ಸರ್ಪಗಳು ಗೋಚರಿಸಿತು ಆ ಮಹಿಮೆಗೆ ಸಿಂಹ, ಶಾರ್ಧೂಲ, ಹುಲಿಗಳ ಆರ್ಭಟ ಕೇಳಿಸುತ್ತಿತ್ತು. ಇದರ ಮಧ್ಯೇ ವಿಶೇಷವಾದ ಪಕ್ಷಿಗಳ “ಚಿಲಿಪಿಲಿ” ನಾದ ಸ್ವರವೂ ಕೇಳಿಬರುತ್ತಿತ್ತು. ಈ ಪಕ್ಷಿಗಳ ಗಾನವು ಶ್ರೀ ಪರಮೇಶ್ವರನನ್ನು ಕುರಿತು ಹಾಡಿದಂತೆ ಬಾಸವಾಯ್ತು. ಮನೋಹರ್ಷವಾಯ್ತು ಆ ಮಹಾತ್ಮನಿಗೆ. 

                       ಶಿವನನ್ನು ಕುರಿತು ಹಾಡುವ ಈ ಪಕ್ಷಿಗಳು ಸಾಮಾನ್ಯ ಪಕ್ಷಿಗಳಲ್ಲ. ಶಿವಾಂಶದಿಂದ ಕೂಡಿದ ಪಕ್ಷಿಗಳು. ಈ ಸ್ಥಳವು ಶಿವಸ್ಥಳವೇ ಸರಿ. ಶಿವನನ್ನು ಕುರಿತು ತಪಸ್ಸು ಮಾಡಲು ಸರಿಯಾದ ಸ್ಥಳವು ಇದೇ, ಎಂಬುದಾಗಿ ನಿರ್ಧರಿಸಿದರು. ಇನ್ನ ಗುರುವಿನ ಉಪದೇಶದಂತೆ ಶುಚಿರ್ಭೂತನಾಗಿ, ಪದ್ಮಾಸನಸ್ಥಿತನಾಗಿ, ತಪಸ್ಸಿಗೆ ಕುಳಿತನು. ಇತರ ಶಬ್ಧಗಳೊಡನೆ ಈ ಮಹಾತ್ಮನ ಬಾಯಿಂದ ಹೊರಡುವ “ಓಂ ನಮಃ ಶಿವಾಯ”, ಮಂತ್ರ ಸ್ವರವೂ ಸೇರಿಕೊಂಡಿತು. ಮಹಿಮನು ಯತಿಯಾದನು. ತಪವು ಮುಂದುವರಿಯಿತು

                       ಅದೆಷ್ಟೋ ಕಾಲ ಶಿವನನ್ನು ಕುರಿತು ನಿದ್ರಾಹಾರಗಳಿಲ್ಲದೇ ತಪಸ್ಸು ಮಾಡುತ್ತಿರಲು ಅದೊಂದು “ಮಹಾ ಶಿವರಾತ್ರಿ” ದಿನ ಶ್ರೀ ಪರಮೇಶ್ವರನು ಈತನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದನು. ಅವನ ಮನಃದಿಷ್ಟಾರ್ಥಗಳನ್ನು ಸಲ್ಲಿಸಿದನು. ದಿವ್ಯವರಗಳನ್ನು ಅನುಗ್ರಹಿಸಿದನು. ಹಾಗೇ ಅಂತರ್ಧಾನವನ್ನೈದಿದನು. 

                          ಶಿವನು ಪ್ರತ್ಯಕ್ಷನಾಗಿ ಅದೃಶ್ಯವಾದ ಸ್ಥಳದಲ್ಲಿ ಶಿವಲಿಂಗವೊಂದು ಗೋಚರಿಸಿತು ಆ ಮುನಿಗೆ. ಮುನಿಯು ಉದ್ಭವ  ಶಿವಲಿಂಗಕ್ಕೆ ಪ್ರತೀ ದಿನವೂ ಪೂಜಾರಾಧನೆ ಮಾಡುತ್ತಾ ಗೆಡ್ಡೆ ಗೆಣಸುಗಳನ್ನು ನೈವೇದ್ಯ ಮಾಡುತ್ತಾ ತಾನೂ ಅದೇ ಪ್ರಸಾದವನ್ನು ಭಂಚಿಸುತ್ತಾ ಕಾಲ ಕಳೆಯುತ್ತಿದ್ದನು. 

                          ಹೀಗಿರಲು ಒಂದು ದಿನ ನಾಡಿನ ಬೇಟೆಗಾರರು ಬೇಟೆಯಾಡುತ್ತಾ ಈ ದಾರಿಗಾಗಿ ಬರುವಲ್ಲಿ ಅದೆಲ್ಲಿಂದಲೋ “ಓಂ ನಮಃ ಶಿವಾಯ”: ಮಂತ್ರೋಚ್ಚಾರಣೆ ಕೇಳಿಸಿತು. ಮಂತ್ರ ಕೇಳುವ ಕಡೆಗೆ ಹೋಗಲು ಈ ಮುನಿಯ ಇರುವಿಕೆಯನ್ನು ಕಂಡರು. ಮುನೀಶ್ವರನಿಗೆ ಭಕ್ತಿಯಿಂದ ಕೈಮುಗಿದರು. ಮುನಿಯಿಂದ ವಿಚಾರಗಳನ್ನು ತಿಳಿದುಕೊಂಡರು. ಮುನಿಯಿಂದ ಶಿವಪ್ರಸಾದವನ್ನು ಸ್ವೀಕರಿಸಿದರು. ಬೇಟೆಗಾರರಿಗೂ ಭಕ್ತಿಯುಂಟಾಯ್ತು. ಮನೋ ನೆಮ್ಮದಿ ಆಯ್ತು. 

                         ಬೇಟೆಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಅವರವರ ಮನೆಯಲ್ಲಿ ಈ ಋಷಿಯ ವಿಚಾರಗಳನ್ನು ವಿವರಿಸಿದರು. ಒಬ್ಬರಿಂದೊಬ್ಬರು ವಿಚಾರ ಹೇಳುತ್ತಾ ಎಲ್ಲರಿಗೂ ಗೊತ್ತಾಯಿತು.   ಒಬ್ಬೊಬ್ಬರಾಗಿ ಈ ಶಿವಕ್ಷೇತ್ರಕ್ಕೆ ಬಂದು ಮುನಿಯನ್ನು ಕಂಡು, ಮುನಿಯಿಂದ ಶಿವಪೂಜೆ ಮಾಡಿಸಿ ಶ್ರೀ ಶಿವಪ್ರಸಾದ ಸ್ವೀಕರಿಸಿದರು. ಬೇಟೆಗಾರರಿಗೂ ಭಕ್ತಿಯುಂಟಾಯಿತು. ಮನೋಹರ್ಷ ಆಯಿತು. ಶ್ರೀ ಮಹದೇವರ ಅನುಗ್ರಹ ಎಲ್ಲಿರಿಗೂ ಲಭಿಸಿತು. ಆ ಯೋಗಿಯಾದರೂ ಹಸನ್ಮುಖದಿಂದ ಎಲ್ಲರನ್ನೂ ಪ್ರೀತಿಯಿಂದ ಕಾಣತ್ತಿದ್ದನು. ಶ್ರೀ ದೇವರ ಪ್ರಸಾದವನ್ನು ಭಕ್ತಿಯಿಂದ ಎಲ್ಲರಿಗೂ ಹಂಚುತ್ತಿದ್ದನು. ಎಲ್ಲರ ಮೆಚ್ಚಿನ ಯೋಗಿಯಾದನು.  ಮಹಾಡವಿಯಲ್ಲಿ ಯೋಗಿಯೊಬ್ಬನು ಶಿವಸಾಕ್ಷಾತ್ಕಾರವಾಗಿ, ಜಪ, ಧ್ಯಾನ, ಕೀರ್ತನೆಗಳಿಂದ ಶಿವಯೋಗಿಯಾಗಿ ಒಬ್ಬನೇ ಇರುವನೆಂಬ ವಿಚಾರವು ದೂರ ದೂರಕ್ಕೆ ಹರಡಿತು. ಶಿವಕ್ಷೇತ್ರಕ್ಕೆ ಭಕ್ತರು ಸಾಲುಸಾಲಾಗಿ ಬರತೊಡಗಿದರು. ಕೆಲವು ಜನ ಕೃಷಿಕರು ಭಕ್ತರಾಗಿ ಬಂದು, ಶಿವ ಪೂಜೆ ಮಾಡಿಸಿಕಪಂಡು ಶಿವ ಪೂಜೆಗೆ ಅನುಕೂಲವಾಗಲೀ ಎಂದು ಶಿವಕ್ಷೇತ್ರದ ಸಮೀಪದಲ್ಲೇ ಕಾಡುಕಡಿದು, ಚಿಕ್ಕ ಚಿಕ್ಕ ಬಿಡಾರಗಳನ್ನು ಮಾಡಿಕೊಂಡರು. ಕೃಷಿಯನ್ನು ಮಾಡಿದರು. ಬೆಳೆ ತೆಗೆದರು. ಶಿವಯೋಗಿಯನ್ನಾಶ್ರಯಿಸಿದರು.  ಯೋಗಿಗೂ ಜನರ ಬೆಂಬಲ ಅನುಕೂಲಕೊಟ್ಟಿತು. ಹೀಗೆ ಹಲವು ಸಂವತ್ಸರಗಳು ಕಳೆದವು.  ಅಡವಿಯಲ್ಲಿ ಹಲವು ಜನ ಕೃಷಿಕರು ಬಂದು, ಕಾಡು ಕಡಿದು ಮನೆಗಳನ್ನು ಕಟ್ಟಿಕೊಂಡರು. ಜೀವನಕ್ಕೆ ಬೇಕಾದ ಉತ್ಪತ್ತಿ ಬೆಳೆಸಿಕೊಂಡರು. ಜೀವನದ ದಾರಿಯನ್ನು ಕಂಡುಕೊಂಡರು. ಹಲವು ವಾಸದ ಮನೆಗಳಾದವು. 

                       ಕಾಡುಹೋಗಿ “ಕೇರಿ” ಆಯಿತು. ಹೊಸದಾಗಿ ಒಂದು ಕೇರಿ ಉತ್ಪನ್ನವಾಯೊತು. “ಹೊಸಕೇರಿ” ಆಯಿತು. ಆ ಹೆಸರೇ ಶಾಶ್ವತವಾಯಿತು. ದೇವಪಕ್ಷಿಗಳು “ಚಿಲಿಪಿಲಿ” ನಾದಸ್ವರದಿಂದ ಶಿವನಾಮ ಸ್ತೋತ್ರ ಹಾಡಿದ್ದರಿಂದ ಆ ಮಹಾಮುನಿಯು. ಈ ಕ್ಷೇತ್ರಕ್ಕೆ.“ಶ್ರೀ ಚಿಲಿಪಿಲಿ ಮಹದೇವ”ಎಂಬುದಾಗಿ ಹೆಸರಿಟ್ಟನು. ಈಗಲೂ ಇಲ್ಲಿ ಪ್ರಭಾತದಲ್ಲಿ ಸುಪ್ರಭಾತದಂತೆ ಪಕ್ಷಿಗಳು ಹಾಡುವುದನ್ನು ಕೇಳಬಹುದು. ಈ ನಾದಸ್ವರವೂ ಬಹು ರಮ್ಯವಾಗಿರುತ್ತದೆ. ಹೀಗೆ ಅನೇಕ ವರ್ಷಗಳು ಕಳೆಯವಲ್ಲಿ ಆ ಯತಿವರ್ಯನು ಒಂದು ದಿನ ಶಿವೈಕ್ಯನಾದನು. ಪ್ರತಿದಿನವೂ ಶಿವನಿಗೆ ನಡೆಯುತ್ತಿದ್ದ ಪೂಜೆಯು ನಿಂತು ಹೋಗುವುದಲ್ಲಾ ಎಂದು ಹೊಸಕೇರಿ ಗ್ರಾಮದ ಜನರು ನಿತ್ಯ ಪೂಜೆಗೆ  ಯೋಗ್ಯ ಅರ್ಚಕರನ್ನು ನಿಯಮಿಸಿದರು. ಶಿವನಿಗೆ ನಿತ್ಯಪೂಜೆ ನಿಲ್ಲಲು ಬಿಡಲಿಲ್ಲ.  

     ಅಂದಿನಿಂದ ಇಂದಿನವರಿಗೂ “ಶ್ರೀ ಚಿಲಿಪಿಲೀಶ”ನಿಗೆ ಪೂಜೆ ನಡೆಯುತ್ತಲೇ ಇದೆ. ಒಬ್ಬ ಅರ್ಚಕ ತಪ್ಪಿದರೆ ಮತ್ತೊಬ್ಬ ಮಗದೊಬ್ಬ ಹೀಗೆ ಉದ್ಬವ ಶ್ರೀ ಶಿವಲಿಂಗಕ್ಕೆ ನಿತ್ಯಪೂಜೆ ಸಲ್ಲುತ್ತಲೇ ಇದೆ.ಶ್ರೀ ಚಿಲಿಪಿಲೀಶನು ಭಕ್ತಾದಿಗಳ ಕೋರಿಕೆಗಳನ್ನು ಈಡೇರಿಸುತ್ತಿದ್ದಾನೆ. ಈ ವಿಶೇಷವಾದ ಕ್ಷೇತ್ರಕ್ಕೆ ನೀವೂ ಒಮ್ಮೆ ಹೋಗಿ ದರ್ಶನ ಮಾಡಿ ಧನ್ಯರಾಗಿ. ಲೇಖಕರು:ಸಿ. ಓ. ಶಿವರಾಮ ಶಾಸ್ತ್ರಿ