Dakshina kashi Ramanathapura Temple

ದಕ್ಷಿಣಕಾಶಿ ರಾಮನಾಥಪುರ ಕ್ಷೇತ್ರ ಮಹಾತ್ಮೆ :-

                           ವಹ್ನಿ ಪುಷ್ಕರಿಣಿ:  ಗತಕಾಲದಲ್ಲಿ “ಸವ್ಭಕ್ಷಕನಾಗು” ಎಂದು ಭೃಗುಮಹರ್ಷಿಗಳಿಂದ ಶಾಪಗ್ರಸ್ತನಾದ ಅಗ್ನಿ ಅವಮಾನಿತನಾಗಿ ವಿಂಧ್ಯದ ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡಲಾರಂಭಿಸಿದ. ಅಗ್ನಿಯಿಂದಲೇ ಹವಿರ್ಭಾಗಗಳನ್ನು ಸ್ವೀಕರಿಸುತ್ತಿದ್ದ ದೇವತೆಗಳು ಸಹಜವಾಗಿಯೇ ಅಗ್ನಿಯ ಕಣ್ಮರೆಯಿಂದ ಚಿಂತಾಕ್ರಾಂತರಾದರು. ಇತ್ತ ಅಗ್ನಿ ದಂಡಕಾರಣ್ಯದಲ್ಲಿದ್ದ ರುದ್ರರಮಣೀಯವಾದ ಪುಷ್ಕರವೊಂದನ್ನು ಸೇರಿ, ಅದರ ತಟದಲ್ಲಿಯೇ ತನಾಗಿಯೇ ಉದ್ಭವಿಸಿರುವ ಪರಮಕಾರುಣಿಕ ಶಿವಲಿಂಗವನ್ನು (ಎಂದರೆ ಇಂದಿನ ರಾಮೇಶ್ವರನ್ನು) ಅರ್ಚಿಸುತ್ತಾ ಘೋರತಪಗೈದನು. 

                         ಅಗ್ನಿಯ ತಪೋಮಹಿಮೆಯಿಂದುಟಾದ ಜಾಲ್ವೆಯು ಸಮಸ್ತ ಲೋಕವನ್ನೇ ಸುಡಲಾರಂಭಿಸಿದಾಗ ಭಯಗೊಂಡ ಇಂದ್ರಾದಿ ದೇವತೆಗಳು ಕೈಲಾಸವಾಸಿ ಪರಮೇಶ್ವರನ ಸನ್ನಿಧಾನಕ್ಕೆ ಬಂದು ಅಗ್ನಿಗೆ ಅಭೀಷ್ಪಫಲವನ್ನು ಅನುಗ್ರಹಿಸಿ ತಮಗೆ ಹವಿರ್ಭಾಗಗಳು ಅಹರ್ನಿಶಿ ಲಭಿಸುವಂತೆ ಹರಸಬೇಕೆಂದು ಬಿನ್ನವಿಸಲು ಅಗ್ನಿಯು ಆರಾಧಿಸುತ್ತಿದ್ದ ಲಿಂಗದಲ್ಲಿಯೇ ಪ್ರತ್ಯಕ್ಷನಾದ ವಹ್ನಿನೇತ್ರ ಈಶ್ವರ. ಅವನನ್ನು ವಹ್ನಿಯು ವಹ್ನಿಸೂಕ್ತದಿಂದ ಸ್ತೋತ್ರ ಮಾಡಿ ಸಾಷ್ಟಾಂಗವೆರಗಿದ. ಪರಮಸಂತೋಷಗೊಂಡ ಪರಶಿವನು ಅಗ್ನಿಯ ದೋಷಕ್ಲೇಷಗಳನ್ನು ನಾಶಮಾಡಿ ಆಶೀರ್ವದಿಸಿ ಆ ಲಿಂಗದಲ್ಲಿಯೇ ಅದೃಶ್ಯನಾದ. 

                         ಆನಂತರ ಅಗ್ನಿಯು ಪಾಪವಿನಾಶಿಯಾದ ಪುಷ್ಕರದಲ್ಲಿ ಸ್ನಾನಾದಿಗಳನ್ನು ಪೂರೈಸಿಕೊಂಡು ವಿಇಧವಾದ ಕುಸುಮಗಳಿಂದ ಬಗೆ ಬಗೆಯಾಗಿ ಈಶ್ವರನ್ನು ಆರಾಧಿಸುತ್ತಾ ಯಜ್ಷಯಾಗಾದಿಗಳನ್ನು ನಿರಂತರ ಮಾಡುತ್ತಲಿದ್ದನು. ಅಗ್ನಿಯ ಕಾಯಕದಿಂದ ಸುಪ್ರೀತನದ ಕೈಲಾಸವಾಸಿಯು ಪಾರ್ವತಿಸಮೇತನಗಿ ತನ್ನ ಪರಿವಾರದವರೊಡನೆ ಲಿಂಗಮಧ್ಯದಿಂದ ದರ್ಶನ ಭಾಗ್ಯವನ್ನಿತ್ತಾಗ ಅಗ್ನಿಯು “ಕರುಣಾಸಾಗರನಾದ ಸ್ವಾಮಿಯೇ, ಈ ಲಿಂಗದಲ್ಲಿ ನನ್ನಿಂದ ಆರಾಧಿಸಲ್ಪಟ್ಟ ನೀನು ಅನುಗಾಲವು ಇಲ್ಲಿಯೇ ನೆಲೆಸಿ ಭಕ್ತ ಜನರಿಗೆ ವಾಂಛಿತಾರ್ಥಗಳನ್ನು ಕೊಟ್ಟು ಉದ್ದರಿಸಬೇಕು” ಎಂದು ಪ್ರಾರ್ಥಿಸಲು “ತಥಾಸ್ತು” ಎಂದ ವಹ್ನೀಶ್ವರನು ಅಗ್ನಿಯನ್ನು ಕುರಿತು ನೀನು ತ್ರಿಕಾಲವೂ ಈ ಪುಪ್ಕರದಲ್ಲಿ ಸ್ನಾನ ಮಾಡಿ ನನ್ನನ್ನು ಆರಾಧಿಸಿದ ಈ ಸ್ಥಳವು ನನಗೂ ಪ್ರಿಯವೇ. ಸಮಸ್ತ ಪಾಪಗಳನ್ನೂ ಕಳೆವ ಈ ಪುಷ್ಕರವು ಇನ್ನು ಮುಂದೆ “ವಹ್ನಿ ಪುಷ್ಕರಿಣಿ” ಎಂದು ಪ್ರಸಿದ್ಧವಾಗಲಿ. ಮುಂದೆ ಅಗಸ್ತ್ಯ ಮಹರ್ಷಿಗಳ ಸತಿಯಾದ ಕಾವೇರಿಯೂ ನದಿರೂಪವಾಗಿ ಹರಿಯುವಳು. ದಕ್ಷಿಣಕ್ಕೆ ಕಾವೇರಿಯೂ, ಉತ್ತರಕ್ಕೆ ಗಂಗೆಯೂ ಶ್ರೇಷ್ಠಳು. ವಹ್ನಿ ಪುಷ್ಕರಿಣಿ ಸಹಿಳಾದಕಾವೇರಿ ದಕ್ಷಿಣೋತ್ತರಗಳಲ್ಲಿರುವ ಸರ್ವನದಿಗಳಿಗೂ ಶ್ರೇಷ್ಠಳು. ಎಂಬುದಾಗಿ ವರವನ್ನಿತ್ತು ಅಂತರ್ಧಾನವಾದ. 

                         ಲೋಕದಲ್ಲಿ ವಹ್ನಿಪುಷ್ಕರಿಣಿ, ಅರ್ಕಪುಷ್ಕರಿಣಿ, ಚಂದ್ರ ಪುಷ್ಕರಿಣಿ ಎಂಬ ಮೂರು ಪುಷ್ಕರಣಿಗಳಿರುವುವು. ಈ ಮೂರು ಪುಷ್ಕರಿಣಿಗಳೂ ಕಾವೇರಿಯಲ್ಲಿಯೇ ಇರುತ್ತದೆ. ಪುರಾಣಗಳಲ್ಲಿ “ವಾಸವಾಪುರಿ” ಎಂದೇ ಪ್ರಖ್ಯಾತವಾದ ಇಂದಿನ “ರಾಮನಾಥಪುರ”ದಲ್ಲಿ ವಹ್ನಿಪುಷ್ಕರಿಣಿಯಿದೆ. 

                       ಇದೇ ವಹ್ನಿ ಪುಷ್ಕರಿಣಿಯಲ್ಲಿ ಪಂಚವರ್ಣಗಳ ವೈವಿಧ್ಯಮಯವಾದ ಹಾಗೂ ನಾನಾ ಜಾತಿಯ ಬೃಹತ್ ಮೀನುಗಳು ಇವೆ. ಈ ಈ ಮತ್ಸ್ಯಗಳೆಲ್ಲವೂ ಶಿವನ ಸಾನಿಧ್ಯದಲ್ಲಿರುವ ದೇವತೆಗಳ ಅವತಾರವೆಂದು ನಂಬಿಕೆಯಿದೆ. ಎಂತಹ ಭಯಂಕರ ಪ್ರವಾಹ ಬಂದರೂ ಮತ್ಸ್ಯಗಳು ಮಾತ್ರ ಅಗಲಲಾರವು. ಇದು ನಂಬಿಕೆಗೆ ಬಲವಾದ ಬೇರಿನಂತಿದೆ.

    ಹಿಂದೆ ಮೈಸೂರಿನ ಅರಸರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಕ್ಷೇತ್ರಕ್ಕೆ ಆಗಮಿಸಿದಾಗ ಒಂದೆರಡು ಮೀನಿಗೆ ಮುತ್ತಿನ ಮೂಗುತಿಯನ್ನು ಅಲಂಕರಿಸಿದರೆಂದು ಹೇಳುತ್ತಾರೆ.