Makki Shasthavu Temple Napoklu

 ನಾಪೋಕ್ಲುವಿನ ಮಕ್ಕಿ ಶಾಸ್ತಾವು ಸನ್ನಿಧಿ :-

                         ಮಡಿಕೇರಿ ತಾಲ್ಲೂಕಿನ ಎರಡನೆಯ ಮುಖ್ಯ ಪಟ್ಟಣವಾದ ನಾಪೋಕ್ಲುವಿನಿಂದ ಬೇತು ಮಾರ್ಗವಾಗಿ ಎರಡು ಕಿಲೋಮೀಟರ್ ಅಂತರವನ್ನು ಕ್ರಮಿಸಿದರೆ ಸಿಗುವ ಶ್ರೀ ಮಕ್ಕಿ ಶಾಸ್ತಾವು ದೇವಾಸ್ಥಾನ ಒಂದು ಸುಂದರ ಪರಿಸರ. ಇಲ್ಲಿ ನಿರ್ಸಗದ ಕೆಲವು ವೇಶಿಷ್ಟ್ಯಗಳಿರುವುದು ಬಿಟ್ಟರೆ ಬೇರೇನೂ ಇಲ್ಲ. ಭಕ್ತಿಯ ಅಲೆಗಳನ್ನು ಚಿಮ್ಮಿಸುವ ಸುಂದರ ದೇಗುಲವಿರುವುದು ಪ್ರಶಾಂತ ತಾಣದಲ್ಲಿ. ದೇಗುಲ ಎಂದೊಡನೆ ಗುಡಿಗೋಪುರಗಳ ಕಲ್ಷನೆಯನ್ನು ಮಾಡಿಕೊಳ್ಳಬೇಡಿ. ಸಿಗುವ ಒಂದಷ್ಟು ಮೆಟ್ಟಿಲುಗಳನ್ನೇರಿ ಎತ್ತರದ ಸಮತಟ್ಟ ಸ್ಥಳಕ್ಕೆ ಬಂದರೆ ಸುಮಾರು ಐದಡಿ ಎತ್ತರದ ರ್ವತ್ತಾಕಾರದ ಕಟ್ಟೆ ಕಾಣಸಿಗುತ್ತದೆ. ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ದೇವರಿಗೆ ಆಶ್ರಯವಿತ್ತಂತೆ ಕೋರುವ ಒಂದು ಹಲಸಿನ ಮರ, ಸುತ್ತಲೂ ಸಹಸ್ರಾರು ಹರಕೆಯ ನಾಯಿಗಳು, ಇವಿಷ್ಟು ಬಿಟ್ಟರೆ ಗುಡಿಗೋಪುರಗಳಿಲ್ಲ. ಆನರ ಸದ್ದುಗದ್ದಲವಿಲ್ಲ. ಅದು ನಿಶ್ಯಬ್ದ ತಾಣ. 

                          ಮಕ್ಕಿ ಶ್ರೀ ಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ವಿಭಿನ್ನ ಆಚರಣೆಗಳ ಹಬ್ಬ ಒಮ್ಮೆ ಮೇ ತಿಂಗಳಲ್ಲಿ ಜರುಗಿದರೆ ಮತ್ತೊಮ್ಮ ಡಿಸೆಂಬರ್‍ನಲ್ಲಿ ಜರುಗುತ್ತದೆ. ಎರಡೂ ಹಬ್ಬಗಲು ಅತ್ಯಂತ ಆಕರ್ಷಣೀಯವಾಗಿರುತ್ತದೆ. ಎತ್ತು ಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲುಗಳು, ಮೇಲೇರಿ ಮುಂತಾದ ಹಲವು ವೈಶಿಷ್ಟ್ಯಗಳೊಂದಿಗೆ ಮಕ್ಕಿ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ. 

                           ಮಕ್ಕಿ ಶಾಸ್ತಾವು ಉತ್ಸವ ಎರಡು ದಿನಗಳ ಕಾರ್ಯಕ್ರಮ ಮೊದಲನೆ ದಿನದ ಉತ್ಸವವು ಎತ್ತು ಹೇರಾಟದೊಂದಿಗೆ ಆರಂಭವಾಗುತ್ತದೆ. ನಡು ಮಧ್ಯಾಹ್ನದ ಮೇಲೆಗೆ ಊರಿನ ಹಲವು ಎತ್ತುಗಳನ್ನು ಅಲಂಕರಿಸಿ ಅವುಗಳ ಬೆನ್ನ ಮೇಲೆ ಹರಕೆಯ ಅಕ್ಕಿಯನ್ನು ಶ್ವೇತವಸ್ತ್ರದಲ್ಲಿ ಕಟ್ಟಿ ಇರಿಸಿ ದೇಗುಲದ ಕಟ್ಟೆಯ ಸುತ್ತ ಓಡಿಸಲಾಗುತ್ತದೆ. ವಾದ್ಯತಂಡದವರು ತಮ್ಮ ಕಾಶಲ್ಯದಿಂದ ಚಂಡೆ ಬಾರಿಸಿ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತಾರೆ. 

                           ಎರಡನೆಯ ದಿನದ ಕಾರ್ಯಕ್ರಮದಲ್ಲಿ ಕೋಲಗಳ ವೈಭವಪೂರ್ಣ ಪ್ರದರ್ಶನ. ಅಜ್ಜಪ್ಪ ಕೋಲ ಹಾಗೂ ವಿಷ್ಣುಮೂರ್ತಿ ಕೋಲ-ಇವು ಅಂದಿನ ವೈಶಿಷ್ಟ್ಯಗಳು. ದೇವಾಲಯದ ನಿರ್ದಿಷ್ಟ ತಾಣಗಳಲ್ಲಿ ಈ ಕೋಲಗಳು ನರ್ತಿಸಿ ಸಾಗುವಾಗ ಮೈ ಜುಂ ಎನಿಸುತ್ತವೆ. ನಡು ಮಧ್ಯಾಹ್ನದ ವೇಳೆಗೆ ವಿಷ್ಣುಮೂರ್ತಿ ಕೋಲ  ಹರಡಿರುವ ಕೆಂಡದ ರಾಶಿಯ ಮೇಲೆ ಬೀಳುವಾಗ ಭಕ್ತಾಧಿಗಳಲ್ಲಿ ರೋಮಾಂಚನ. ಈ ಕಾರ್ಯಕ್ರಮದ ಬಳಿಕ ಕೋಲ ಬೆಳ್ಳಿಯ ಮುಖವಾಡ ಧರಿಸಿ ದೇವಾಲಯದಪ್ರಾಂಗಣಕ್ಕೆ ಬಂದು ಭಕ್ತರನ್ನು ಹರಸುನ ಕ್ರಮವಿದೆ. 

                            ಹಿಂದಿನಿಂದ, ಪರಿಪಾಲಿಸಿಕೊಂಡು ಬಂದಿರುವ ಮಕ್ಕಿ ದೇವಾಲಯದ ಹಬ್ಬದ ಆಚರಣೆಗಳು ಏನೇ ಇರಲಿ ‘ಮಕ್ಕಿ’ ಸುತ್ತಮುತ್ತಲಿನವರಿಗೆ ಒಂದು ಪುನೀತ ಕ್ಷೇತ್ರವಂತೂ ಹೌದು. ಹಲವು ಜನರ ನಂಬಿಕೆಯ ಆಗರವಾಗಿರುವ ಮಕ್ಕಿಯಲ್ಲಿ ಹರಸಿಕೊಮಡವರ ಬಯಕೆಗಳು ಈಡೇರುವುವು. ಸಂಕಷ್ಟಗಳು ನಿವಾರಣೆಯಾಗುವುವು. ಹಾಗಾಗಿಯೇ ನಾಪೋಕ್ಲುವಿನ ಮಕ್ಕಿ ದೇವಾಲಯ ಸೌಂದರ್ಯ ಮತ್ತು ಭಕ್ತಿಯ ತಾಣವಾಗಿ ಪ್ರಸಿದ್ಧಿ ಹೊಂದಿದೆ. 

                            ದೀಪಾರಾಧನೆ-ಈ ತಾಣದಲ್ಲಿ ರಾತ್ರಿ ನಡೆಯುವ ವಿಶೇಷ ಕಾರ್ಯಕ್ರಮ. ಸದಾ ನೀರಾವತೆ ಪ್ರಶಾಂತತೆ ತುಂಬಿರುವ ತಾಣದಲ್ಲಿ ಅಂದು ಸುತ್ತಲೂ ಮಾರ್ದನಿಸುವಂತೆ ಚಂಡೆಯ ಸದ್ದು. ಕಾರ್ಯಕ್ರಮದ ವೀಕ್ಷಣೆಗೆ ಬಂದ ಅಸಂಖ್ಯ ಭಕ್ತಾಧಿಗಳು ಸುಮಾರು ರಾತ್ರಿ 10 ಗಂಟೆಯ ವೇಳೆಗೆ ಆರಂಭವಾಗುವ ಮನಸೆಳೆವ ದೀಪಾರಾಧನೆ ಕಾರ್ಯಕ್ರಮ ಸುಮಾರು ಎರಡು ಗಂಟೆ ಕಾಲ ಜರುಗುತ್ತದೆ. 

                              ಮಕ್ಕಿ ದೇವಾಲಯದ ವಿಶಿಷ್ಠತೆಗೆ ಸಂಬಂಧಿಸಿದಂತೆ ಹಲವು ಕಥೆಗಳು ಪ್ರಚಲಿತದಲ್ಲಿವೆ. ಊರವರ ನಂಬಿಕೆಗೆ ತಕ್ಕಂತೆ ಇಲ್ಲಿ ಶಾಸ್ತಾವು ಸನ್ನಿಧಿಯಲ್ಲಿ ಮಳೆಗಾಗಿ ರುಧ್ರಾಭಿಷೇಕ ಮಾಎಇಸಿದರಂತೆ. ಅದಾದ ಮೂರು ದಿನಗಳಲ್ಲಿ ಧಾರಾಕಾರವಾಗಿ ಮಳೆಯಾಯಿತಂತೆ. ಈ ಸಂದರ್ಭವನ್ನು ಊರವರು ಸದಾ ನೆನಪಿಸಿಕೊಳ್ಳುತ್ತಾರೆ. 

                             ಊರವರ ನಂಬಿಕೆಯ ಮತ್ತೊಂದು ಘಟನೆ ಇದು. ಕೆಲವು ವರ್ಷಗಳ ಹಿಂದೆ, ಮಕ್ಕಿ ದೇವಾಲಯದಲ್ಲಿ ಹಬ್ಬದ ಸಂದರ್ಭದಲ್ಲಿ ತಿರುವಳವಾಣ ಕಾರ್ಯನಿರ್ವಹಿಸುತ್ತಿದ್ದವನನ್ನು ಯಾವುದೋ ಕಾರಣಕ್ಕಾಗಿ ಬಂಧಿಸಲಾಯಿತಂತೆ. ಹಬ್ಬದ ಸಂದರ್ಭದಲ್ಲಿ ದೇವಾಲಯದಲ್ಲಿ ಮುಗಿಲು ಮುಟ್ಟುವಂತೆ ಚೆಂಡೆವಾದ್ಯ ಮೊಳಗಿತು. 

                            ಅದೇ ಸಂದರ್ಭದಲ್ಲಿ ಸೆರೆಮನೆಯಲ್ಲಿದ್ದವನಿಗೆ ತಿರುವಳ ಆರಂಭವಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದನಂತೆ. ಆತ ನೇರವಾಗಿ ಮಕ್ಕಿ ದೇವಾಲಯದ ಪ್ರಾಂಗಣಕ್ಕೆ ಬಂದವನೇ ದೇವರ ಮುಂದೆ ತನ್ನ ಕೈಯನ್ನು ಕೊಡುವುತ್ತಾನೆ. ಹಾಗೆ ಮಾಡಿದ ಸಂದರ್ಭದಲ್ಲಿ ಆತನ ಕೈಯ ಕೊಳ ಒಡೆದು ದೇಗುಲವಿರುವ ತಾಣದ ಹಲಸಿನ ಮರದ ರೆಂಬೆಯೊದರಲ್ಲಿ ಸಿಲುಕಿತು ಎಂದು ಜನ ನಂಬುತ್ತಾರೆ. ಇದಕ್ಕೆ ಸಾಕ್ಷಿಯಾಗಿ, ಮಕ್ಕಿ ಶ್ರೀ ಶಾಸ್ತಾವು ಸನ್ನಿಧಿಯಲ್ಲಿ ಹಲಸಿನ ಮರದಲ್ಲಿ ಚಿಕ್ಕ ಸರಪಣಿಯೊಂದು ಸಿಲುಕಿಕೊಂಡಿರುವುದನ್ನು ಕಾಣಬಹುದು.        ಲೇಖಕರು : ಸಿ. ಎಸ್. ಸುರೇಶ್