Kail Mahurtha Festival

ಸಂಭ್ರಮದ ಕೈಲ್ ಮುಹೂರ್ತ ಹಬ್ಬ:

                    ಸಂಭ್ರಮದ ಕೈಲ್ ಮುಹೂರ್ತ ಹಬ್ಬವನ್ನು ಸೆಷ್ಟೆಂಬರ್ ಮೂರರಂದು ಆಚರಿಸಲಾಗುತ್ತದೆ. ಜಿಲ್ಲೆಯ ಮೂರು ಪ್ರಮುಖ ಹಬ್ಬಗಳಲ್ಲಿ ಕೈಲ್ ಮುಹೂರ್ತವೂ ಒಂದು, ಕಾವೇರಿ ತುಲಾ ಸಂಕ್ರಮಣ ಹಾಗೂ ಹುತ್ತರಿ ಉಳಿದೆರಡು ಪ್ರಮುಖ ಹಬ್ಬಗಳು ಕೈಲ್ ಮುಹೂರ್ತ ಹಬ್ಬದ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆಯಿದೆ. ನಾಲ್ಕುನಾಡು ವ್ಯಾಪ್ತಿಯಲ್ಲಿ ಆಗಸ್ಟ್ 28 ರಂದು ಹಬ್ಬವನ್ನು ಆಚರಿಸುತ್ತಾರೆ. ಕೇಲ್ ಪೊಳ್ದ್ ಅನ್ನು ಮನರಂಜನಾ ಹಬ್ಬವಾಗಿ ಕೊಡಗಿನಲ್ಲಿ ಆಚರಿಸಲಾಗುತ್ತದೆ. ಕೈಲ್ ಎಂದರೆ ಆಯುಧ. ಪೊಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ ಕೈಲ್ ಪೊಳ್ದ್ ಅನ್ನು ಆಯುಧ ಪೂಜೆ ಎಂದೂ ಕರೆಯುತ್ತಾರೆ. ಈ ಹಿಂದೆ ಪ್ರಾಣಿಗಳ ಬೇಟಿಗೆ ಕೋವಿ ಕತ್ತಿಗಳನ್ನು ಬಳಸುತ್ತಿದ್ದರು. ಆದರೆ ವ್ಯವಸಾಯದ ಸಂದರ್ಭದಲ್ಲಿ ಅಂದರೆ ಸಿಂಹ ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಕನ್ನಿಕೋಂಬರೆಯಲ್ಲಿ ಇಡುತ್ತಾರೆ. ಕೃಷಿ ಕಾರ್ಯ ಮುಗಿದ ನಂತರ ಆಯುಧಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಅವುಗಳನ್ನು ಹೊರಗೆ ತೆಗೆಯಲಾಗುತ್ತದೆ. ಈ ಆಯುಧಗಳನ್ನು ಕನ್ನಿಕೋಂಬರೆಯಿಂದ ಹೊರ ತೆಗೆದು ಭಕ್ತಿಯಿಂದ ಪೂಜಿಸಲಾಗುತ್ತದೆ. ಕೋವಿಯನ್ನು ಪೂಜಿಸಲು ತೋಕುಪೂ (ಕೋವಿ ಹೂ) ವನ್ನು ಬಳಸುತ್ತಾರೆ. ಕಾಡುಗಳಲ್ಲಿ ಬೆಳೆಯುವ ವರ್ಣ ರಂಜಿತ ಗೌರಿ ಹೂ ಇದು. 

                                   ಕೈಲ್ ಮುಹೂರ್ತ ಹಬ್ಬದ ನಂತರ ಕತ್ತಿ ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ಗದ್ದೆ ವ್ಯವಸಾಯದಲ್ಲಿ ನೇಗಿಲು ನೊಗ ಗುದ್ದಲಿ ಇತ್ಯಾದಿ ವ್ಯವಸಾಯ ಉಪಕರಣಗಳಿಗೆ ವಿರಾಮ. ಅಂತೆಯೇ ಈ ಎಲ್ಲಾ ಉಪಕರಣಗಳನ್ನು ತೊಳೆದು ಪೂಜೆ ಸಲ್ಲಿಸಲಾಗುತ್ತದೆ. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ ಗಂಧ ಹಚ್ಚಿ ಅಲಂಕರಿಸಲಾಗುತ್ತದೆ. ಅಕ್ಕಿ ಬೆಲ್ಲದಿಂದ ಮಾಡಿದ ಪಾಯಸವನ್ನು ಅವುಗಳಿಗೆ ತಿನ್ನಿಸಲಾಗುತ್ತದೆ. ಗದ್ದೆ ಕೆಲಸಕ್ಕೆ ಬಳಸಿದ ಸಲಕರಣೆಗಳನ್ನು ತೊಳೆದು ಪೂಜೆ ಸಲ್ಲಿಸಿ ಸುರಕ್ಷಿತವಾಗಿರಿಸಿದರೆ ಅವು ಬಳಕೆಯಾಗುವುದು ಮುಂದಿನ ವರ್ಷಕ್ಕೆ. ಕಡಂಬಿಟ್ಟು ಹಾಗೂ ಹಂದಿ ಮಾಂಸದೂಟ ಕೈಲ್ ಮುಹೂರ್ತ ಹಬ್ಬದ ವಿಶೇಷ. ಬಳಿಕ ಎಲ್ಲರೂ ಮಂದ್‍ನಲ್ಲಿ ಸೇರುತ್ತಾರೆ. ಅಲ್ಲಿ ಕೋವಿಯ ಮೂಲಕ ಗುಂಡು ಹಾರಿಸಿ ಹಬ್ಬದ ಆಚರಣೆಯನ್ನು ಸಾರುತ್ತಾರೆ. ಮಕ್ಕಾಳಾದಿಯಾಗಿ ಹಿರಿಯರವರೆಗೆ ಎಲ್ಲರಿಗೂ ಅಲ್ಲಿ ಶೌರ್ಯ ಪ್ರದರ್ಶನದ ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಮರದ ತುದಿಗೆ ತೆಂಗಿನಕಾಯಿ ಕಟ್ಟಿ ಅದಕ್ಕೆ ಗುಂಡು ಹೊಡೆಯಲಾಗುತ್ತದೆ. ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಬೇಟೆಯಾಡುವ ಸಮಯವನ್ನು ನಿರ್ಧರಿಸುತ್ತಾರೆ. ಇದು ಹಿಂದಿನಿಂದ ಬೆಳೆದು ಬಂದ ಪದ್ಧತಿ. ಆದರೆ ಆಧುನಿಕತೆಯ ಭರಾಟೆಯಲ್ಲಿ ಬಹುತೇಕ ಆಚರಣೆಗಳು ಮರೆಯಾಗಿವೆ. ಆಯ್ಕೆ:- ಕೊಡಗಿನ ಧಾರ್ಮಿಕ ಕೇಂದ್ರಗಳು ಮತ್ತು ಗ್ರಾಮೀಣ ಉತ್ಸವಗಳು ಲೇಖಕರು:- ಸಿ. ಎಸ್ ಸುರೇಶ್