Kumaradhara River Story

ಕುಮಾರಧಾರಾ :

                    ಅನೇಕಾನೇಕ ವರುಷಗಳ ಹಿಂದೆ ನಮ್ಮ ದೇಶದಲ್ಲಿ ತಾರಕಾಸುರ ಎಂಬ ಹೆಸರಿನ ರಾಕ್ಷಸನಿದ್ದನು. ಇವನು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ಒಂದು ವಿಚಿತ್ರ ರೀತಿಯ ವರವನ್ನು ಪಡೆದುಕೊಂಡಿದ್ದ. “ಶಿವ ಪಾರ್ವತಿಯರ ಮಗನಿಂದ ಮಾತ್ರ ನನಗೆ ಮರಣ ಬರಬೇಕು. ಅನ್ಯರಿಂದ ಬಾರದಿರಲಿ” ಹೀಗೆ ಆತ ವರವನ್ನು ಕೇಳಿಕೊಳ್ಳಲು ಒಂದು ಕಾರಣವಿತ್ತು. ಶಿವನ ಪತ್ನಿ ದಾಕ್ಷಾಯಣೀ ದೇವಿ ದಕ್ಷನ ಯಾಗಕ್ಕೆ ಹೋಗಿ ಅಲ್ಲಿ ಅವಮಾನಿತಳಾಗಿ ಆಕೆ ಯೋಗಾಗ್ನಿಯಲ್ಲಿ ಬೆಂದು ಬೂದಿಯಾದ ಕಥೆ ಲೋಕಪ್ರಸಿದ್ಧವಾಗಿತ್ತು. ಆ ಸಂದರ್ಭದಲ್ಲಿ ಮಹಾವಿಷ್ಣು ಒಂದು ಭವಿಷ್ಯವಾಣಿಯನ್ನು ನುಡಿದಿದ್ದ. ಶಿವನು ಆಕೆಯನ್ನು ಮರಳಿ ಪತ್ನಿಯಾಗಿ ಪಡೆಯಬೇಕೆಂದು ವೈರಾಗ್ಯದಿಂದ ತಪಸ್ಸು ಮಾಡಲು ಕುಳಿತನು. ಭವಿಷ್ಯದಲ್ಲಿ “ದಾಕ್ಷಾಯಣಿ ಪರ್ವತ ರಾಜನಿಗೆ ಮಗಳಾಗಿ ಹುಟ್ಟುತ್ತಾಳೆ. ಪಾರ್ವತಿಯಾಗಿ ಮತ್ತೆ ಶಿವನ ಪತ್ನಿಯಾಗುತ್ತಾಳೆ” ಎಂದು ಮಹಾವಿಷ್ಣು ಆಡಿದ ಭವಿಷ್ಯವಾಣಿಯ ಬಗೆಗೆ ತಾರಕಾಸುರನಿಗೆ ಎಳ್ಳಿನಿತೂ ನಂಬಿಕೆ ಇರಲಿಲ್ಲ. ಅದು ಕಟ್ಟುಕತೆ ಎಂದು ಆತ ಭಾವಿಸಿದನು. ತೀರಾ ಅಸಂಭಾವ್ಯವಾದ ಘಟನೆ ಅದು ಎಂದು ಗ್ರಹಿಸಿದ ಕಾರಣ; ತಪಸ್ಸು ಮಾಡುತ್ತಿರುವ ಶಿವನು ಸಂಸಾರಿಯಾಗದೆ ಸಂನ್ಯಾಸಿಯೇ ಆಗಬಹುದೆಂದು ಭಾವಿಸಿದನು. ಅದಕ್ಕಾಗಿಯೇ ಮರಣ ಬರುವುದಾದರೆ ಶಿವ-ಪಾರ್ವತಿಯರ ಮಗನಿಂದಲೇ ಬರಲಿ ಎಂಬ ವರವನ್ನು ಬ್ರಹ್ಮದೇವರಿಂದ ಕೇಳಿಕೊಂಡಿದ್ದನು. ತನಗಿನ್ನು ಸಾವೇ ಬಾರದು ಎಂದು ಭ್ರಮಿಸಿಕೊಂಡಿದ್ದ. ತಾರಕ ಅಹಂಕಾರದಿಂದ ಬೀಗಿದನು. ಕಂಡ ಕಂಡವರನ್ನು ಪೀಡಿಸಿದನು.

                     ಮೂರು ಲೋಕಗಳನ್ನು ಸ್ವಾಧೀನ ಪಡಿಸಿಕೊಂಡನು. ದೇವತೆಗಳನ್ನು, ಋಷಿಗಳನ್ನು, ಸಜ್ಜನರನ್ನು, ಹೆಂಗಸರನ್ನು, ಗೋವುಗಳನ್ನು ಹಿಂಸಿಸಿದನು. ಭೂಮಿಯ ಮೇಲೆ ನಿರಂತರ ಆಕ್ರಮಣ ಮಾಡತೊಡಗಿದನು. ನಿಸರ್ಗದ ಸಂಪತ್ತುಗಳೆಲ್ಲವೂ ತನ್ನ ಮತ್ತು ತನ್ನ ಪರಿವಾರದವರ ಭೋಗಕ್ಕೆ ಮೀಸಲಾದುದೆಂದು ಭ್ರಮಿಸಿ ನೈಸರ್ಗಿಕವಾದ ಸಂಪತ್ತುಗಳೆಲ್ಲವನ್ನೂ ಕೊಳ್ಳೆ ಹೊಡೆಯತೊಡಗಿದನು. ತಾರಕಾಸುರ ಮತ್ತು ಆತನ ಪರಿವಾರದವರ ಹಾವಳಿ ಅತಿಯಾಯಿತು. ಅವರನ್ನು ನಿಗ್ರಹಿಸಲು ಯಾವುದೇ ಆಡಳಿತ ಸಮರ್ಥವಾಗಲಿಲ್ಲ. ಭೂಮಿ ಬರಡಾಯಿತು. ಲೋಕ ತತ್ತರಿಸಿತು. ಋಷಿಗಳು-ದೇವತೆಗಳು ಭೂಮಿಯನ್ನು ಮತ್ತು ಜೀವಜಲಗಳನ್ನು ನದಿ-ಪರ್ವತಗಳನ್ನು, ಗಿಡ-ಮರಗಳನ್ನು ಉಳಿಸುವ ದಾರಿಯನ್ನು ಹುಡುಕುತ್ತಲೇ ಇದ್ದರು. ಕಾಲಾಂತರದಲ್ಲಿ ಅವರಿಗೆ ಭರವಸೆಯ ಬೆಳಕೊಂದು ಮೂಡಿತು. ದಾಕ್ಷಾಯಣಿ ಪರ್ವತರಾಜ ನಂದಿನಿಯಾಗಿ ಮರುಜನ್ಮವನ್ನು ಪಡೆದಳು. ಪಾರ್ವತಿ ಎಂಬ ಹೆಸರು ಪಡೆದಳು. ಶಿವನನ್ನೇ ಪತ್ನಿಯನ್ನಾಗಿ ಪಡೆಯಬೇಕೆಂಬ ಉದ್ದೇಶದಿಂದ ಉಗ್ರ ತಪಸ್ಸನ್ನು ಕೈಗೊಂಡಳು. ಶಿವನೂ ತಪಸ್ಸನ್ನು ಮಾಡುತ್ತಿದ್ದ. ಅವರೀರ್ವರು ಸತಿ-ಪತಿಗಳಾಗಬೇಕು. ಅದಕ್ಕಾಗಿ ದೇವತೆಗಳು ಉಪಾಯವನ್ನು ಹುಡುಕಿದರು. ಮನ್ಮಥನ ಸಹಾಯದಿಂದ ಶಿವ-ಪಾರ್ವತಿಯರು ದಂಪತಿಗಳಾದರು.ಶಿವ ಪಾರ್ವತಿಯರಿಗೆ ಆರು ಮುಖಗಳುಳ್ಳ ಸುಂದರ ಮಗುವಿನ ಜನನವಾಯಿತು. ತಂದೆ-ತಾಯಿಗಳು ಆ ಮಗುವಿಗೆ ಕುಮಾರ ಎಂದು ಹೆಸರಿಸಿದರು. ಆರು ಮುಖಗಳುಳ್ಳ ಆ ಕಂದನನ್ನು ಎಲ್ಲರೂ ಷಣ್ಮುಖ ಎಂದು ಕರೆದರು. ಶಿವ-ಪಾರ್ವತಿಯರು ಮಗುವಿನ ಬಾಲಲೀಲೆಗಳನ್ನು ಕಂಡು ಸಂತೋಷಪಟ್ಟರು.

                       ಆ ಸಮಯಕ್ಕೆ ಸರಿಯಾಗಿ ದೇವೇಂದ್ರ ಅಲ್ಲಿಗೆ ಬಂದ. ಇನ್ನೂ ಆರೇಳು ದಿನಗಳಾಗದ ಮಗು. ತಾರಕಾಸುರನ ಸಂಹಾರಕ್ಕೆ ಆ ಮಗುವನ್ನು ಕಳುಹಿಸಿಕೊಡಬೇಕೆಂದು ದೇವೇಂದ್ರ ಶಿವ-ಪಾರ್ವತಿಯರೊಡನೆ ಕೇಳಿಕೊಂಡ. ಲೋಕದ ಕ್ಷೇಮಕ್ಕಾಗಿ ಅವರು ಇಂದ್ರನೊಡನೆ ತಮ್ಮ ಕಂದನನ್ನು ಕಳುಹಿಸಿಕೊಟ್ಟರು. ದೇವತೆಗಳು ಯುದ್ಧ ಸಿದ್ಧತೆಯನ್ನು ಮಾಡಿದರು. ದೇವ ಸೇನಾನಿಯಾಗಿ ಕುಮಾರನನ್ನು ನೇಮಿಸಲಾಯಿತು. ಆತನನ್ನು ಕುಮಾರ ಪರ್ವತಕ್ಕೆ ಕರೆತಂದು, ಜಗತ್ತಿನ ಎಲ್ಲಾ ನದಿಗಳ ನೀರನ್ನು ತಂದು ಸಮುದ್ರದ ನೀರಿನೊಂದಿಗೆ ಅಭಿಷೇಕ ಮಾಡಿದನು. ಆ ನೀರು ನದಿಯಾಗಿ ಪ್ರವಹಿಸಿ ಕುಮಾರಧಾರಾ ಎಂದು ಹೆಸರು ಪಡೆಯಿತು. - ಲೇಖಕರು : ತಾರಾನಾಥ ವರ್ಕಾಡಿ