Surya Narayana Temple

ಪವಿತ್ರ ನಾರಾವಿ ಕ್ಷೇತ್ರ-ಪೌರಾಣಿಕ ಹಿನ್ನೆಲೆ ಭಾಗ-1

                        ಮಾನವನ ಚಿಂತನೆಗಳು ಹತ್ತು ಹಲವು ಮುಖಗಳನ್ನು ಹೊಂದಿರಬಹುದು. ಅದೇನಿದ್ದರು ನಾರಾವಿಯ ಮಟ್ಟಿಗೆ ಹೇಳುವುದಾದರೆ ಒಂದು ಕಾಲದಲ್ಲಿ ಇದು ನೆಲಜಲ ಸಂಪದ್ಭರಿತ ಪ್ರದೇಶವಾಗಿತ್ತು. ಪೌರಾಣಿಕವಾಗಿ ಸೂರ್ಯನು ಮೂಲ ಫಲ್ಗೂಣಿಯ ನಾರಾದಲ್ಲಿ ಯಣ ನಾದುದರಿಂದ ಅಂದರೆ ಫಲ್ಗುಣಿಯ ಜಲದಲ್ಲಿ ಸ್ಥಾಯಿಯಾಗಿ ನೆಲೆ ನಿಂತದ್ದರಿಂದ ಸೂರ್ಯನಾರಾಯಣನಾದ. ಅದರ ಸಂಕೇತವಾಗಿಯೆ ಮೂಲ ವಿಗ್ರಹವು ಪದ್ಮ ಲಾಂಛನವನ್ನು ಹೊಂದಿದೆ. ಮುಂದೆ ಈ ಪವಿತ್ರ ಕ್ಷೇತ್ರವನ್ನು ನಾರಾಯಣೋ ರವಿಃ ನಾರಾವಿ ಎಂದು ಕರೆಯಲಾಯಿತು. ಹೀಗೆ ರವಿಯು ನಾರಾಯಣನಾಗಿ ನಾರಾಯಣನೇ ರವಿಯಾಗಿ ಮೆರೆದ ಈ ನಾರಾವಿಯನ್ನು ಜನಪದೀಯ ಉಲ್ಲೇಖಗಳ ಪ್ರಕಾರ ನಾರವಿಃ ಅಥವಾ ನಾರವಿ ನಾರವಿ ಎಂಬ ಒಂದು ಸಾಂದರ್ಬಿಕ ಹತಾಶೆಯ ಕೂಗಿಗೆ ಸ್ಪಂದಿಸಿ ನಾರವಿ ನಾರಾವಿಯಾಯಿತೆಂದು ಹೇಳಲಾಗುತ್ತದೆ.

                ಸುಮಾರು ಹದಿನಾಲ್ಕನೇ ಶತಮಾನದ ಮಧ್ಯಭಾಗದಲ್ಲಿ ಸೋಮನಾಥನೆಂಬವ ಈ ದೇವಸ್ಥಾನವನ್ನು ಸೂರ್ಯದೇವನ ಪರಮಭಕ್ತೆಯಾದ ತನ್ನ ತಾಯಿ ರಮಾದೇವಿಯ ಹೆಸರಲ್ಲಿ ಕಟ್ಟಿಸಿದನೋ ಅಥವಾ ಪುನನಿರ್ಮಿಸಿದೆನೂ ಎಂಬುದನ್ನು ಸ್ಫಷ್ಟವಾಗಿ ಹೇಳಲಾಗದು. ಅದೇನಿದ್ದರೂ ಈ ಪ್ರದೇಶ ಪೌರಾಣಿಕವಾಗಿ ಕುಬೇರನಾಡು ಎಂದೆನಿಸಿದ್ದು ಮುಂದೆ ಚಾರಿತ್ರಿಕವಾಗಿ ಕಂಪಲಸೀಮೆಯಾಗಿ, ಕೊಪ್ಪಲವಾಗಿ ಕರೆಸಿಕೊಂಡಿತ್ತು. ಹಲವೊಂದು ದಾಖಲೆಗಳ ಪ್ರಕಾರ ಇದನ್ನು ಪೆರಾಡಿ ಸೂರ್ಯನಾರಾಯಣ ಎಂದೂ ಉಲ್ಲೇಖಿಸಲಾಗಿದೆ.

               ಇಲ್ಲಿನ ದೇವರು ಮತ್ತು ಪ್ರದೇಶ ಅಮೂಲು ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವುದರಿಂದಲೇ ಇಂದು ಇದು ಭಕ್ತ ಜನರ ಅಭೀಷ್ಟ ಸಿದ್ಧಿಯ ಪವಿತ್ರ ನೆಲೆಯಾಗಿದೆ. ಅಗಸ್ತ್ಯಾದಿ ಮುನಿಗಳಿಂದ, ಲೋಪಾಮುದ್ರೆಯಾದಿಯಾಗಿ ಋಷಿ ಪತ್ನಿಯವರಿಂದ ಪುನೀತವಾಗಿ ಮೆರೆದ ಈ ಪ್ರದೇಶ ಇಂದಿಗೂ ತನ್ನ ಅಂದಿನ ಛಾಪನ್ನು ಬಿಟ್ಟುಕೊಟ್ಟಿಲ್ಲ.ಸೂರ್ಯನ ಪರಮ ಭಕ್ತರಾದ ವೃಷಭನೆಂಬ ದಾನವ ಆದಿತ್ಯಮಂತ್ರ ಸಿದ್ಧಿಯನ್ನು ಮಾಡಿಕೊಂಡು ಬ್ರಹ್ಮನ ವರಬಲದಿಂದ ಸಾತ್ವಿಕ ಸಮಾಜಕ್ಕೆ ಕಂಟಕ ಪ್ರಾಯನಾಗಿ ಮೆರೆದು ದೇವತೆಗಳನ್ನು ಪೀಡಿಸಿ ದೇವಶಿಲ್ಪಿಯ ಸುತೆ ತಿಲೋತ್ತಮೆಯನ್ನು ಅಪಹರಿಸಲು, ದುಷ್ಟರ ಕೈಗೆ ದೇವಮಂತ್ರ ಸಿದ್ಧಿಗಾಗಿ ತನ್ನ ಸ್ಥಿತಿ ಕಾರ್ಯಕ್ಕೆ ಆತಂಕ ಉಂಟಾಗುತ್ತಿರುವುದನ್ನು ಕಂಡ ಶ್ರೀ ಹರಿಯು ದುಃಖಿಸಿ ಯೋಗ ನಿದ್ರೆಗೆ ಜಾರುತ್ತಾನೆ. ಅವನ ಕಣ್ಣಿಂದ ಹರಿದ ಕಂಬನಿಯಿಂದ ಕುಂಭಕಂಠಿಣಿ ಎಂಬ ದೇವಕನ್ಯೆ ಉತ್ಪತ್ತಿಯಾಗುತ್ತಾಳೆ.

               ತನ್ನ ಮಂತ್ರ ಸಿದ್ಧಿಯಿಂದಾಗಿ ಸೃಷ್ಠಿ ಹಾಳಾಗುತ್ತಿರುವುದನ್ನು ಮನಗಂಡ ಸೂರ್ಯದೇವನು ತಿಲೋತ್ತಮೆಯಿಂದಲೇ ಅವನ ವ್ರತ ಭಂಗ ಮಾಡಿಸುತ್ತಾನೆ. ಶ್ರೀ ಹರಿಯ ಪ್ರೇರಣೆಯಂತೆ ಕುಂಭಕಂಠಿಣಿ ಅವನ ವಧೆಯನ್ನು ಮಾಡಿ, ಸೃಷ್ಠಿಯ ರಕ್ಷಣೆಯಲ್ಲಿ ತೊಡಗುತ್ತಾಳೆ. ಈ ಸಂದರ್ಭದಲ್ಲಿ ತಿಲೋತ್ತಮೆಯಲ್ಲಿ ಸೂರ್ಯನಿಂದ ಹುಟ್ಟಿದ ಮಗುವೆ ಫಲ್ಗುಣಿ. ಉತ್ತರಾ ನಕ್ಷತ್ರದಲ್ಲಿ ಜನಿಸಿದ ಈ ಮಗುವನ್ನು ಕುಂಭಕಂಠಿಣಿಯ ಒತ್ತಾಸೆಯಂತೆ ತಕ್ಷಕನು ಪುತ್ರಿನಂತೆ ಸಲಹುತ್ತಿರಲು ಇವಳು ನಮ್ಮವಳಲ್ಲ ಎಂದು ನಾಗಕನ್ನಿಕೆಯರು ಅವಳನ್ನು ಪೀಡಿಸುತ್ತಾರೆ.ಪರಿಸ್ಥಿತಿಯನ್ನು ಅರ್ಥವಿಸಿಕೊಂಡ ಕುಂಭಕಂಠಿಣಿ ನಾಗಕುಲವನ್ನು ಶಪಿಸುತ್ತಾಳೆ. ಫಲ್ಗುಣಿಗೆ ಸೂರ್ಯನೇ ನಿನ್ನ ತಂದೆಯೆಂದು ಅವಳ ಜನ್ಮ ರಹಸ್ಯವನ್ನು ತಿಳಿಸುತ್ತಾಳೆ ಅಂತೆಯೇ ಶ್ರೀ ಹರಿಯನ್ನು ತಪಸ್ಸಿನಿಂದ ಒಲಿಸಿ ತಂದೆಯಾದ ಸೂರ್ಯನನ್ನು ಸೇರುವಂತೆ ಪ್ರೇಪಿಸುತ್ತಾಳೆ.

                ಫಲ್ಗುಣಿಯ ತಪಸ್ಸಿಗೆ ಭಕ್ತಧೀನನಾದ ಶ್ರೀಹರಿಯು ಸಾಕ್ಷಾತ್ಕಾರ ಮಂತ್ರಾಧೀನನಾದ ಸೂರ್ಯನನ್ನು ಕರೆಸಲು ನನ್ನನ್ನು ತಬ್ಬಲಿಯಾಗಿಸಿದ ತಪ್ಪಿಗೆ ನನ್ನ ತಂದೆ ಸೂರ್ಯದೇವನು ಇಲ್ಲಿಯೇ ನೆಲೆಸಿ ನನ್ನ ಸೇವೆಗೆ ಅನುವುಮಾಡಿಕೊಡಬೇಕೆಂದು ಪ್ರಾರ್ಥಿಸುತ್ತಾಳೆ. ಆದರೆ ಪ್ರಖರ ಉರಿಮೈಯ ಸೂರ್ಯನಿಗೆ ಇದು ಅಸಾಧ್ಯವಾದ್ದರಿಂದ ಶ್ರೀಹರಿಯ ಇಚ್ಚೆಯಂತೆ ಫಲ್ಗುಣಿ ನದಿಯಾಗಿ ಹರಿಯುತ್ತಾಳೆ. ಸೂರ್ಯನು ಆ ಜಲದಲ್ಲಿ ಸ್ಥಾಯಿಯಾಗಿ ನೆಲೆಗೊಂಡು ನಾರಾಯಣನಾಗುತ್ತಾನೆ. ಇದೇ ಮುಂದೆ ಸೂರ್ಯನಾರಾಯಣನೆಂದು ಕರೆಸಿಕೊಳ್ಳಲ್ಪಡುತ್ತದೆ.ಸೂರ್ಯನೆ ತನ್ನ ಮಗಳನ್ನು ಅಪಹರಿಸಿರಬಹುದೆಂದು ಶಂಕಿಸಿ ಸೂರ್ಯ ಪಥವನ್ನು ತಡೆಯಲು ವಿಂದ್ಯಾಚಲನಿಗೆ ಒತ್ತಾಸೆ ಮಾಡಿ ಅವನನ್ನು ಶಿಕ್ಷಿಸಲು  ಹೊರಟ ಅಗಸ್ತ್ಯರನ್ನು ಕಚ್ಚಿದ್ದ ತಕ್ಷಕನು, ಕುಂಭಕಂಠಿಣಿಯ ಆದೇಶದಂತೆ ಈ ಸೂರ್ಯನಾರಾಯಣ ಸನ್ನಿಧಿಯಲ್ಲಿ ನಾಗಕನ್ನಿಕೆಯವರೊಂದಿಗೆ ವಿಷಹರ ನಾಗಬ್ರಹ್ಮನಾಗಿ ನೆಲೆಸಲು, ಸ್ವಯಂ ಕುಂಭಕಂಠಿಣಿ ಕ್ಷೇತ್ರಪಾಲಳಾಗಿ ಇಲ್ಲಿಯೆ ಮುಂದೆ ನೆಲೆಸುತ್ತಾಳೆ.

                ಹೀಗೆ ಮುಂದೆ ಕುಂಭಕಂಠಿಣಿ ಕೊಡಮಣಿತ್ತಾಯಿಯೆನಿಸಿ ಈ ಕ್ಷೇತ್ರದಲ್ಲಿ ಸೂರ್ಯ ನಾರಾಯಣನಿಗೆ ಗುಡಿ ನಿರ್ಮಿಸಲು ಸೂಕ್ತ ಭಕ್ತರ ಶೋಧನೆಯಲ್ಲಿರಲು ರಾಜಮಾತೆ ರಮಾದೇವಿಯೆ ಈ ಕೆಲಸಕ್ಕೆ ತಕ್ಕವಳು ಎಂದು ತಿಳಿದು ಪರಿಪರಿಯಾಗಿ ಆಕೆಯನ್ನು ಪೀಡಿಸುತ್ತಾಳೆ. ಅವಳ ಪ್ರೇರಣೆಯಂತೆ ಅದಿನೆಂಟು ರಾತ್ರಿ ಹದಿನೆಂಟು ಹಗಲು ಮುಸಲಧಾರೆ ಸುರುದು ಮೋಡ ಆವರಿಸಿ ಸೂರ್ಯನು ಮರೆಯಾಗುತ್ತಾನೆ. ಸೂರ್ಯನನ್ನು ಕಾಣದೆ ಭೂಸುರವರ್ಗ ನಾರವಿಃ ನಾವಿಃ ಎಂದು ಹಾಹಾಕಾರ ಮಾಡುತ್ತಿರಲು, ಸಂಧ್ಯಾವಂದನೆಯನ್ನು ಮಾಡಿ ಸೂರ್ಯನಿಗೆ ಅಘ್ಯವನ್ನು ಕೊಟ್ಟ ಬಳಿಕವಷ್ಟೆ ಊಟವನ್ನು ಮಾಡುವ ಪರಿಪಾಠವನ್ನು ಇಟ್ಟುಕೊಂಡ ರಮಾದೇವಿಯು ಸೂರ್ಯನನ್ನು ಕಾಣದೆ ಉಪವಾಸವಿರುತ್ತಾಳೆ. ಮಗ ಸೋಮನಾಥನು ತಾಯಿಯ ದುಃಖವನ್ನು ತಿಳಿದು ರಾಜ ಪುರೋಹಿತರ ಆದೇಶದಂತೆ ಸೂರ್ಯನನ್ನು ಆದಿತ್ಯಮಂತ್ರದಿಂದ ಸ್ತುತಿಸಲು ಮೋಡ ಸರಿದು ಸೂರ್ಯನು ಎಂದಿನಂತೆ ಆಕಾಶದಲ್ಲಿ ಬೆಳಗುತ್ತಾನೆ.

               ಸೂರ್ಯನ ಆಗಮನವನ್ನು ಕಂಡು ಸಂತಸಗೊಂಡು ಭೂಸುರವರ್ಗ ಪಾರಣಿಯಲ್ಲಿ ತೊಡಗಲು ಹೊಟ್ಟೆನೋವಿನಿಂದ ಬಳಲುತ್ತಾರೆ. ರಮಾದೇವಿಯ ಕೈತುತ್ತು ವಿಷವಾಗಿ ಪರಿಣಮಿಸಿ ಸೋಮನಾಥ ಕುಷ್ಠರೋಗಪೀಡಿತನಾಗುತ್ತಾನೆ. ದುಃಖ ತಪ್ತಾಳಾದ ರಮಾದೇವಿಯ ಅಖಂಡ ಸೂರ್ಯೋಪಾಸನೆ ಮಾಡಲು ಸೂರ್ಯನು ಮಂಡಲವನ್ನು ವಿಸರ್ಜಿಸದೆ ಊಟಮಾಡಿದ್ದರಿಂದ ಈ ಕಷ್ಟ ಬಂತೆಂದು ಹೇಳುತ್ತಾನೆ. ಸೂರ್ಯಮಂಡಲ ಬರೆದ ಜಾಗದಲ್ಲಿಯೆ ಸೂರ್ಯನಿಗೆ ದೇವಸ್ಥಾನವನ್ನು ನಿರ್ಮಿಸಿದ್ದಲ್ಲಿ ನಿನ್ನ ಮಗನ ರೋಗ ನಿವಾರಣೆಯಾಗಿ ಭೂಸುರರು ಸಂತುಷ್ಟರಾಗುತ್ತಾರೆಂದು ಹೇಳಿ ಆಶೀರ್ವದಿಸಿ ಹೋಗುತ್ತಾನೆ. ಬಂದವನು ನರನಲ್ಲ ನಾರಾಯಣನೆ ಎಂದು ರಮಾದೇವಿ ಸಂತಸಪಟ್ಟು ದೇವಸ್ಥಾನ ನಿರ್ಮಾಣಕ್ಕೆ ಮನಮಾಡುತ್ತಾಳೆ.

               ಪ್ರಾಯಃ ಈ ದೇವಸ್ಥಾನದ ನಿರ್ಮಾಣಕ್ಕೆ ಇದೇ ಕಾರಣವಾಗಿ ಮುಂದೆ ಅಷ್ಠಧಾರ ವಾಸ್ತುವನ್ನು ಒಳಗೊಂಡ ಸಮಚತುರಸ್ರಾಕಾರದ ಗರ್ಭಗುಡಿಯಲ್ಲಿ ಚಕ್ರಪಾಣಿ ಶಿಲೆಯ, ಜಲಸಂಕೇತವಾಗಿ ಪದ್ಮ ಲಾಂಛನವನ್ನು ಹೊಂದಿದ ಸೂರ್ಯನ ಮೂರ್ತಿಯೊಂದಿಗೆ ಈ ದೇವಸ್ಥಾನ ಜನಮನಕೆ ಸಮರ್ಪಣೆಯಾಗಲು, ಸೋಮನಾಥನ ಕುಷ್ಠರೋಗ ಗುಣವಾಗಿ ಭಕ್ತರ ಆರಾಧನಾ ಕೇಂದ್ರವಾಗಿ ಮೆರೆಯಿತು.

"ಗುಣವಿಲ್ಲದ್ದರೆ ರೂಪ ವ್ಯರ್ಥ...     ನಮ್ರತೆ ಇಲ್ಲದಿದ್ದರೆ ವಿದ್ಯೆ ವ್ಯರ್ಥ...    ಉಪಯೋಗಿಸದಿದ್ದರೆ ಧನ ವ್ಯರ್ಥ...    ಹಸಿವೆ ಇಲ್ಲದಿದ್ದರೆ ಭೋಜನ ವ್ಯರ್ಥ...  ಪ್ರಜ್ಞೆ ಇಲ್ಲದಿದ್ದರೆ ಪ್ರತಿಭೆ ವ್ಯರ್ಥ      ಪರಮಾತ್ಮ ಅರಿಯದಿದ್ದರೆ ಜೀವನವೇ ವ್ಯರ್ಥ....


“ನಾರಾವಿ” ಕೆಲವು ಪ್ರಾಚೀನ ವಿಚಾರಗಳು

“ಕಲ್ಲು ಕತೆ ಹೇಳುತ್ತದೆ: ಎಂಬ ಮಾತೊಂದಿಗೆ. ಇದರ ಒಳಾರ್ಥವೆನೆಂದರೆ ದಾರಿಯಲ್ಲಿ ಕಾಣಸಿಗುವ, ಬಂಡೆಕಲ್ಲೇ ಆಗಲಿ ಅದರ ಪೂತ್ರ್ತೋತ್ತರಗಳನ್ನ್ನು ಕೆದಕುತ್ತ ಹೋದರೆ ಅನೇಕ ರೋಚಕ ವಿಚಾರಗಳು ಬೆಳಕಿಗೆ ಬರಿತ್ತವೆ. ಇದೇ ರೀತಿ, ಒಬ್ಬ ವ್ಯಕ್ತಿ, ಒಂದು ಸ್ಥಳನಾಮ, ಒಂದು ದೇವಾಲಯಗಳ ಹಿನೆಲ್ನೆಗಳನ್ನು ಅವಲೋಕಿಸಿದಾಗಲು, ಹಲವು ರೀತಿಯ ಪ್ರಾಚೀನ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಆ ದೃಷ್ಟಿಯಿಂದ ನಾರಾವಿಯ ಸೂರ್ಯನಾರಾಯಣ ದೇವಳದ ಕುರಿತು ಅಧ್ಯಯಿಸಿದರೆ, ಅನೇಕರು ಕೇಳಿರದ ಹಳೆಯ ಚರಿತ್ರೆಯನ್ನು ತಿಳಿಯಲೆಡೆಯಿದೆ. ತುಳುನಾಡಿನಲ್ಲಿ ಸೂರ್ಯನನ್ನು ಸವೂತ್ತಮನೆಂದು ಒಪ್ಪಿಕೊಂಡ ಸೌರಮತವು ಒಂದು ಕಾಲ ಘಟ್ಟದಲ್ಲಿ ಸಾಕಷ್ಟು ಪ್ರಚಲಿತವಾಗಿತ್ತು. ಶಂಕರ ಭಗವತ್ಪಾದರು, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದಿವಾಕರ ಪಂಡಿತನೆಂಬ ಸೌರಮತದ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ, ಅದ್ವೈತಮತ ಒಪ್ಪಿಕೊಳ್ಳುವಂತೆ ಮಾಡಿದರೆಂಬ ಹೇಳಿಕೆಯಿದೆ. ಹಳ್ಳಿಯ ಜನರು ಪ್ರತಿದಿನ ತುಳಸಿಕಟ್ಟೆಯ ಮುಂದೆ ನಿಂತು, ಸೂರ್ಯನನ್ನು ನೋಡಿ ನಮಸ್ಕರಿಸುವ ರೂಢಿ ಈಗ ಕೂಡ ಉಳಿದಿದೆ. ಸೂರ್ಯನಿಗೆ ವಂದಿಸದೆ ಊಟಮಾಡದಿರುವ ವ್ರತಾಚಾರಣೆಯವರು ಹಿಂದಿನ ಕಾಲದಲ್ಲಿದ್ದು. ತುಳುನಾಡುನಲ್ಲಿ ಸೂರಂಬೈಲು, ಸೂರ್ಲಾಡಿ, ಸೂರಿಂಜೆ ಇತ್ಯಾದಿ ಸೂರ್ಯ ಸಂಬಂಧಿ ಹೆಸರಿನ ಊರುಗಳಲ್ಲಿ ಸೂರ್ಯನ ದೇವಾಲಯಗಳಿವೆ. ಕಟೀಲಿನ ಪಶ್ಚಿಮದಲ್ಲಿ ದೇಲಂತಬೆಟ್ಟು ಎಂಬಲ್ಲಿ ಈಗ ಜನಾರ್ಧನ ದೇವಾಲಯವಿದೆ. ಆದರೆ ಶತಮಾನಗಳ ಹಿಂದೆ ಅದು ಸೂರ್ಯ ದೇವಸಾನವಾಗಿತ್ತು. ಸೂರ್ಯಬಿಂಬವು ಅಲ್ಲಿಯೇ ನಂದಿನಿ ನದಿಯ ಆಳದ ಗುಂಡಿಯಲ್ಲಿದೆ ಎಂದು ಹೇಳುತ್ತಾರೆ. ನೋಡಿದವರಿದ್ದಾರೆ.

ನಾರಾವಿ ಸ್ಥಳನಾಮಕ್ಕೆ ಜಲಸಮೃದ್ಧವಾದ ಪ್ರದೇಶ, ಅಥವಾ ನಾರಿನಿಂದ ಕೂಡಿದ ವೃಕ್ಷಗಳಿರುವ ಊರು ಎಂದು ಕೋಶಗಳಲ್ಲಿ ಅರ್ಥ ಹೇಳಿದ್ದಾರೆ. ಪ್ರಳಯ ಕಾಲದಲ್ಲಿ ಮಹಾವಿಷ್ಣು ದೇವರು, ದೀಘಕಾಲ ನೀರಿನಲ್ಲಿ ತೇಲಾಡಿದ್ದ ಕಾರಣ ಅವನಿಗೆ ನಾರಾಯಣನೆಂಬ ನಾಮಧೇಯವಾಯಿತಂತೆ, ನಾರಾವಿ ಈಗ ಒಂದು ಸಾಮಾನ್ಯ ಊರಾಗಿರಬಹುದು. ಆದರೆ ಇತಿಹಾಸ ಕಾಲದಲ್ಲಿ, ವೇಣೂರಿನ ಅಜಿಲರಸರ ಆಡಳಿತೆಯ ಒಂದು ಪ್ರದೇಶವಾಗಿತ್ತು. ಇಲ್ಲಿಯ ಸೂರ್ಯನಾರಾಯಣ ದೇವಸ್ಥಾನದಲ್ಲಿರುವ ಶಿಲಾಲೇಖವನ್ನು ಕ್ರಿ.ಶ.1928-19ರ ಅವಧಿಯಲ್ಲಿ, ಪ್ರತಿತೆಗೆದಿರುತ್ತಾರೆ. ಅವರು ಪ್ರಕಟಿಸಿರುವ ವರದಿಯಂತೆ, ಆ ಶಾಸನವನ್ನು ಕ್ರಿ.ಶ. 1489 ಫೆಬ್ರವರಿ 25 ಬುಧವಾರ ದಿನ ಬರೆಯಲಾಗಿದೆ. ವೇಣೂರಿನ ರಾಣಿ ರಮಾದೇವಿಯ ಮಗ ಮಹಾಮಂಡಲೇಶ್ವರ ಸೋಮನಾಥ ಪೆನ್ನಣರಸು, ಸೂರ್ಯನಾರಾಯಣ ದೇವರಿಗೆ ನಿತ್ಯ ಪೂಜಾದಿಗಳಿಗೆಂದು ಭೂಮಿಗಳನ್ನು ದತ್ತಿಯಾಗಿ ನೀಡಿದುದ್ದನ್ನು ಶಾಸನವು ಉಲ್ಲೇಖಿಸಿದೆ. ಈ ಶಾಸನವು ಮಳೆ, ಬಿಸಿಲು, ಗಳಿಯಿಂದ ರಕ್ಷಿಸುವುದು ನಮ್ಮೆಲ್ಲರ ಕತ್ಯವ್ಯವಾಗಿದೆ.

ಕ್ರಿ.ಶ. 1453ರಲ್ಲಿ ಮೂಡಬಿದಿರೆಯ ತ್ರಿಭುವನ ತಿಲಕ ಚೈತ್ಯಾಲಯದ ಮುಖಮಂಟಪವನ್ನು ಜೈನಶ್ರಾವಕರು ಸೇರಿ ಕಟ್ಟಿಸಿದರೆಂದು ಅಲ್ಲಿರುವ ಶಾಸನವೊಂದು ತಿಳಿಸುತ್ತದೆ. ಈ ಘನ ಕಾರ್ಯಕ್ಕೆ ಸಹಕಾರವಿತ್ತವರ ಶುಭನಾಮಗಳನ್ನು ಅಲ್ಲಿರುವ ಶಿಲಾಫಲಕದಲ್ಲಿ ಬರೆದಿಟ್ಟದ್ದುಂಟು. ಆ ಹೆಸರುಗಳ ಯಾದಿಗಳಲ್ಲಿ, ನಾರಾವಿ ಮೈಂದ ಸೆಟ್ಟಿ, ನಾರಾವಿ ಪದುಮಣ್ಣ ಸೆಟ್ಟಿಯೆಂದು ಎರಡು ಹೆಸರುಗಳಿವೆ. ಅವರಿಬ್ಬರು ಆ ಕಾಲದಲ್ಲಿ ನಾರಾವಿಯ ಶ್ರೀಮಂತ ಜೈನರಾಗಿದ್ದಿರಬೇಕು. ವೇಣೂರಿನ ಗೋಮಟ ಪ್ರತಿಷ್ಠೆಯ ಕಾಲ ಕ್ರಿ.ಶ. 1604 ಮಾರ್ಚಿ 1 ಗುರುವಾರ ದಿನವೆಂದು ದಾಖಲೆಗಳು ತಿಳಿಸುತ್ತವೆ. ಇದನ್ನು ಪ್ರತಿಷ್ಠೆ ಮಾಡಿಸಿದವನು ಅಜಿಲವಂಶದ ತಿಮ್ಮಣ್ಣಾಜಿಲ. ಆದರೆ ಕಾರ್ಕಳದ ಬೈರವರಸರು ಈ ಕಾರ್ಯವನ್ನು ತಡೆಯಬೇಕೆಂದು ವೇಣೂರಿಗೆ ಧಾಳಿಯಿಟ್ಟರು ಇದು ಅವರೊಳಗೆ ಯುದ್ಧಕ್ಕೆ ಕಾರಣವಾಗುತ್ತದೆ. ಇತಿಹಾಸದ ಪುಟಗಳನ್ನು ತಿರುವಿದಾಗ ಈ ಯುದ್ಧ ನಡೆದದ್ದು ನಾರಾವಿಯಲ್ಲಿ ಎಂದು ತಿಳಿದು ಬರುತ್ತದೆ. ಈ ಯುದ್ಧದಲ್ಲಿ ವೇಣೂರಿಗೆ ಜಯ ಸಿಕ್ಕಲು ಕಾರಣ ಸೇನಾನಾಯಕನಾಗಿದ್ದ ನಾರಾವಿ ಕಾಂತು ಸಾಮಾನಿ ಎಂದು ಚರಿತ್ರೆಯಲ್ಲಿ ಉಲ್ಲೇಖವಿದೆ.

ಕಳೆದ ಶತಮಾನದ ಆದಿಭಾಗದಲ್ಲಿ ನಾರಾವಿ ಸೂರ್ಯನಾರಾಯಣ ದೇವರ ಹೆಸರಿನಲ್ಲಿ, ಸುಸಸ್ಜಿತವಾದ ಬಯಲಾಟದ ಮೇಳವೊಂದಿತ್ತು. ತೆಂಕು ತಿಟ್ಟಿನ ಯಕ್ಷಬ್ರಹ್ಮ ದಿ| ಅಗರಿ ಶ್ರೀನಿವಾಸ ಭಾಗವತರು ಪ್ರಪ್ರಥಮ ತಿರುಗಾಟ ಮಾಡಿದ್ದು ನಾರಾವಿ ಮೇಳದಲ್ಲಿ. ಆಗ ದೇವರಾಜರೆಂಬವರು ಅನುಭವಿ ಮದ್ದಳೆಗಾರರಾಗಿ ಮೇಳದಲ್ಲಿದ್ದರು ತಾನು ಅವರಿಂದ ಬಹಳಷ್ಟು ಅನುಭವಗಳನ್ನು ಕೇಳಿ ತಿಳಿದ್ದಿದ್ದೇನೆಂದು ಅಗರಿ ಭಾಗವತರು ಒಂದು ಕಡೆ ಹೇಳಿಕೊಂಡಿದ್ದಾರೆ. ಹಾಗೆಯೇ ಹಿರಿಯರು, ತಾಳಬ್ರಹ್ಮನೆಂಬ ಬಿರುದಾಂಕಿತರಾಗಿದ್ದ ದಿ| ಮವ್ಟಾರು ಕಿಟ್ಟಣ್ಣ ಭಾಗವತರು. ನನಗೆ ಬರೆದಿದ್ದ ಪತ್ರ(4-5-1971) ವೊಂದರ್ಲ್ಲಿ ತಾನು ಐದು ವರ್ಷ ನಾರಾವಿ ಮೇಳದಲ್ಲಿ ತಿರುಗಾಟ ಮಾಡಿದ್ದೇನೆ. ನಾರಾವಿಯಲ್ಲಿ ಅಮ್ಮುಮೊಯಿಲಿಯೆಂಬವರು ಪ್ರಸಿದ್ಧ ಮದ್ದಳೆಗಾರರಿದ್ದರು. ಮೇಳದ ಯಜಮಾನರಾಗಿದ್ದರ ನಾರಾಯಣ (ನಾಣಿ) ಶೆಟ್ರು ಬೆಳುವಾಯಿಯಲ್ಲಿ ಚಂದಪ್ಪಾಳ್ವರೆಂಬವರ ಸಂಚಾಲಕತ್ವದ ಮೇಳವಿತ್ತು ಎಂದು ಬರೆದಿರುತ್ತಾರೆ. ಹೀಗೆ ನಾರಾವಿ ಪ್ವರಾಣಿಕವಾಗಿ, ಚಾರಿತ್ರಿಕವಾಘಿ ಕಲಾತ್ಮಕವಾಗಿ ಶತಮಾನಗಳ ಭವ್ಯ ಪರಂಪರೆಯಿರುವ ಊರಾಗಿದೆ ಎನ್ನುದರ್ಲಿ ಮಾತೆರಡಿಲ್ಲ.