Putthari Festiwal

ಹುತ್ತರಿ ಹಬ್ಬ:

                       ಹುತ್ತರಿ ಹಬ್ಬ ಕೊಡಗಿನಲ್ಲಿ ಸುಗ್ಗಿ ಆಚರಣೆಯ ಹಬ್ಬವೆಂದೇ ಬಿಂಬಿತವಾಗಿದೆ. ನವಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಿಮೆಯ ದಿನ ಹುತ್ತರಿ ಹಬ್ಬ ಬರುತ್ತದೆ. ನವಂಬರ್ ತಿಂಗಳಿನಲ್ಲಿ ಆಚರಿಸುವ ಹುತ್ತರಿಯನ್ನು ‘ಹಸಿ ಹುತ್ತರಿ’ ಎನ್ನುತ್ತಾರೆ. ಗದ್ದೆಯಲ್ಲಿ ಬೆಳೆದ ಹೊಸ ಭತ್ತವನ್ನು ಮನೆಗೆ ತರುವ ಸಂಭ್ರಮವೇ ಈ ಹಬ್ಬದ ಸಂಕೇತವಾಗಿರುತ್ತದೆ. ‘ಹುತ್ತರಿ’ ಎಂಬ ಪದ ಕೊಡವ ಭಾಷೆಯ ‘ಪುತ್ತರಿ’ ಎಂಬ ಪದದಿಂದ ಬಂದಿದೆ. ‘ಪುತ್ತರಿ’ ಎಂದರೆ ಹೊಸ ಅಕ್ಕಿ ಎಂದರ್ಥ. ಅರಿ ಎಂದರೆ ಮಲೆಯಾಳ ಮತ್ತು ತಮಿಳಿನ ಭಾಷೆಗಳಲ್ಲಿ ಅಕ್ಕಿ. ‘ಪುದಿ ಅರಿ’ ಎಂದರೆ ‘ಹೊಸ ಅಕ್ಕಿ’ ಇದೇ ಪುತ್ತರಿಯಾಗಿ ಕ್ರಮೇಣ ಹುತ್ತರಿ ಎಂದಾಗಿದೆ. 

                       ಹುತ್ತರಿ ಎಂದರೆ ರೈತರು ತಾವು ವರ್ಷಪೂರ್ತಿ ಬೆಳೆದ ಧಾನ್ಯಲಕ್ಷ್ಮಿಯನ್ನು ಮನೆಗೆ ತಂದು ಪೂಜಿಸುವ ಒಂದು ಆಚರಣೆ. ಧಾನ್ಯಲಕ್ಷ್ಮಿಯ ಪೂಜೆಯನ್ನು ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಪದ್ಧತಿಗಳಿಂದ, ಕ್ರಮಗಳಿಂದ, ಆಚಾರ-ವಿಚಾರಗಳಿಂದ, ಬೇರೆ ಬೇರೆ ಕಾಲಗಳಲ್ಲಿ ಆಚರಿಸಲಾಗುತ್ತದೆ. ಕೊಡಗಿನಾದ್ಯಂತ ಏಕಕಾಲಕ್ಕೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯಂದು ಆಚರಿಸುತ್ತಾರೆ. 

                       ಹುತ್ತರಿ ಹಬ್ಬ ಅತೀ ವಿಜೃಂಭಣೆಯಿಂದ 10-12 ದಿನಗಳ ಕಾಲ ನಡೆಯುತ್ತದೆ. ಕೊಡವರಲ್ಲಿ ಹಬ್ಬವನ್ನು ನಿಗದಿಪಡಿಸುವ ಒಂದು ವಿಶೇಷ ಕ್ರಮವಿದೆ. ಕೊಡಗಿನ ಕುಲದೈವವೆಂದೇ ಪ್ರಸಿದ್ಧಿ ಪಡೆದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಹುತ್ತರಿ ಹಬ್ಬಕ್ಕೆ 15 ದಿನ ಮುಂಚಿತವಾಗಿ ನಿಗದಿಪಡಿಸಿದ ದಿನದಿಂದ ಹಿಂದಿನ ಆಚರಣೆಯಂತೆ ಅದಕ್ಕೆ ಸಂಬಂಧಿಸಿದ ಕುಟುಂಬಸ್ಥರಿಂದ ಗುರುತಿಸಲ್ಪಟ್ಟವರು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಜ್ಯೋತಿಷ್ಯಶಾಸ್ತ್ರ ದಿನ, ಸಮಯ ನೋಡಿ ಘಳಿಗೆಯನ್ನು ನಿಶ್ಚಯಿಸುತ್ತಾರೆ. ಅದರಂತೆ ಆ ದಿನ ಸಮಯಕ್ಕೆ ಸರಿಯಾಗಿ ಮೊದಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ‘ಕಲ್ಯಾಡ್ಚ ಹಬ್ಬ’ವನ್ನು ನಡೆಸಲಾಗುತ್ತದೆ. ಅನಂತರ ನಿಗದಿತ ಸುಮುಹೂರ್ತದಲ್ಲಿ ರೈತರು ಬೆಳೆದ ಭತ್ತದ ತೆನೆಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ ಕತ್ತರಿಸಿ ತಂದು ದೇವಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. 

                       ಇಗ್ಗುತ್ತಪ್ಪ ದೇವಾಲಯದಲ್ಲಿ ಪೂಜಿಸಿದ ಅನಂತರ ನಿಗದಿಪಡಿಸಿದ ಸಮಯದಲ್ಲಿ ಗ್ರಾಮಸ್ಥರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬದ ಆಚರಣೆಯಲ್ಲಿ ತೊಡಗುತ್ತಾರೆ. ಮನೆಯ ಯಜಮಾನ ಸಾಂಪ್ರದಾಯಿಕ ಉಡುಪು ಧರಿಸಿ, ಕುಪ್ಪಸ ತೊಟ್ಟು ರೇಷ್ಮೆಯ ನಡುಪಟ್ಟಿ ಬಿಗಿದು ಪೀಚೆ ಕತ್ತಿಯನ್ನು ಸಿಕ್ಕಿಸಿ, ರಾಜ ಗಾಂಭೀರ್ಯದಿಂದ ಇಷ್ಟ ದೇವತೆಗಳನ್ನು ಪ್ರಾರ್ಥಿಸುತ್ತಾನೆ. ಅನಂತರ ಮಾವು, ಅಶ್ವತ್ಥ, ಗೇರು ಸೇರಿ 5 ಮರದ ಎಲೆ ಹಾಗೂ ನಿರ್ದಿಷ್ಟ ಜಾತಿಯ ಮರದಿಂದ ಸಿಗುವ ನಾರನ್ನು ತಂದು ನೆರೆ (ಸುರುಳಿ) ಕಟ್ಟುತ್ತಾರೆ. ಇದಾದ ನಂತರ ನೆಲ್ಲಕ್ಕಿಬಾಡೆ (ಮನೆಯ ನಡು ಕೋಣೆ)ಯಲ್ಲಿ ಮನೆ-ಮಂದಿಯೆಲ್ಲ ಸೇರಿ ಕುಲದೇವರನ್ನು ಆರಾಧಿಸಿ ಭತ್ತದ ಗದ್ದೆಗೆ ತೆರೆಳುತ್ತಾರೆ. ಪ್ರಥಮ ಕುಯ್ಲಿಗೆಂದು ಮೀಸಲಿಟ್ಟ ಗದ್ದೆಯಲ್ಲಿ ಕುಟುಂಬದ ಹಿರಿಯನು ಭತ್ತದ ಪೈರನ್ನು ಪೂಜಿಸಿ ಅದಕ್ಕೆ ಹಣ್ಣು ಕಾಯಿ, ಹಾಲು-ಜೇನು ಮುಂತಾದವುಗಳನ್ನು ಸಮರ್ಪಿಸುತ್ತಾರೆ. “ಪೊಲಿ ಪೊಲಿ ದೇವಾ” ಎಂಬ ಏರಿದ ದನಿಯಲ್ಲಿ ಕೂಗುತ್ತ ಶಾಸ್ತ್ರೋಕ್ತವಾಗಿ ಭತ್ತದ ತೆನೆಗಳನ್ನು ಕತ್ತರಿಸಿ ತಂದು ಮನೆಯಲ್ಲಿಟ್ಟು ಪೂಜಿಸಿ ತೆನೆಯಲ್ಲಿದ್ದ ಭತ್ತವನ್ನು ಸುಲಿದು ಪಾಯಸಕ್ಕೆ ಹಾಕಿ ಎಲ್ಲರೂ ಸೇರಿ ಸವಿಯುಣ್ಣುವದೇ ಹುತ್ತರಿ ಹಬ್ಬದ ಪ್ರಮುಖ ಅಂಶ. 

                   ಕೊಡಗಿನಲ್ಲಿ ಆಚರಿಸಲಾಗುವ ಕೆಲವು ಹಬ್ಬಗಳು ಪ್ರತ್ಯೇಕ ಜಾತಿ, ಧರ್ಮ, ಜನಾಂಗಕ್ಕೆ ಮಾತ್ರ ಸೀಮಿತವಾಗಿರುವುದನ್ನು ಕಾಣಬಹುದಾಗಿವೆ. ಆದರೆ ಹುತ್ತರಿ ಹಬ್ಬ ಯಾವುದೇ ಜಾತಿ, ದರ್ಮ, ಜನಾಂಗ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬೆರೆತು ಆಚರಿಸುವ ಹಬ್ಬ. ಹುತ್ತರಿ ಹಬ್ಬಕ್ಕೆ ಮೊದಲು ಗ್ರಾಮದ ಜನರು ನಿಶ್ಚಿತ ದೇವಸ್ಥಾನ ಅಥವಾ ‘ಮಂದ್’ನಲ್ಲಿ ಸೇರಿ ನಡೆಸುವ ಕೋಲಾಟವನ್ನು ‘ಈಡ್’ ಎಂದು ಕರೆಯುತ್ತಾರೆ. ಕೋಲಾಟದ ಅಭ್ಯಾಸವನ್ನು ಎಲ್ಲಾ ಕೊಡವ ಸಮುದಾಯದವರೂ ಸೇರಿ ಮಾಡುತ್ತಾರೆ. ಕೋಲಾಟವು ಊರಿನ ‘ಮಂದ್’ನಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ವಾದ್ಯವಾಗುತ್ತಿರುತ್ತದೆ. ಕೋಲುಗಳಿಗೆ ಗೆಜ್ಜೆ ಕಟ್ಟಿರುತ್ತಾರೆ. ಅದರ ಝಣ ಝಣತ್ಕಾರವು ಕೇಳುತ್ತಿರುತ್ತದೆ. ವಿವಿಧ ರೀತಿಯ ಕೋಲಾಟಗಳು ಇರುತ್ತವೆ. ಕೋಲಾಟದ ಹಾಡು ಪದ್ಯದ ಧಾಟಿಯಲ್ಲಿ ಒಂದು ಒಕ್ಕಣೆಯ ಕೊನೆಯಲ್ಲಿ ಪೊಯಿಲೇ ಪೂಯಿಲೇ (ಕೋಲು ಹೊಡೆಯಿರಿ) ಎಂದು ಹೇಳುತ್ತಿರುತ್ತಾರೆ. ಕೋಲಾಟದ ನಿರ್ದೇಶಕನು ಒಂದು ಆಟ ಮುಗಿದು ಇನ್ನೊಂದು ಕೋಲಾಟ ಆರಂಭವಾಗುವಾಗ ‘ಕೂಹಾ’ ಎಂದು ಕೂಗುತ್ತಾನೆ. 

ಕೋಲಾಟದ ಹಾಡೊಂದು ಹೀಗೆ ಬರುತ್ತದೆ:-  

“ಕೊಟ್ಟ್‍ಡಾ ಮೇದ ನೀ ಊದ್ ಪೊಲೆಯಾ ಪೊಯಿಲೇ ಪೊಯಿಲೆ 

ಊರ್‍ಡ ಮಂದಲ್ ಕೋಲ್ ಕಳಿಂಜ ಪೊಲೆಯಾ ಪೋಯಿಲೇ ಪೊಯಿಲೆ

ನಾಡ್ ಪರಂಬ್‍ಲ್ ಕೋಲ್ ಕಳಿಂಜ ಪೊಲೆಯಾ ಪೋಯಿಲೇ ಪೊಯಿಲೆ

ಇಗ್ಗ್‍ತಪ್ಪಂಡ ಕೋಲಾಟ ಕೊಪ್ಪ್ ಪೊಲೆಯಾ ಪೋಯಿಲೇ ಪೊಯಿಲೆ

ಮಾದೇರಪ್ಪಂಡ ಕೋಲಾಟ ಕೊಪ್ಪ್ ಪೊಲೆಯಾ ಪೋಯಿಲೇ ಪೊಯಿಲೆ

ಬಯತೂರಪ್ಪಂಡ ಕೋಲಾಟ ಕೊಪ್ಪ್ ಪೊಲೆಯಾ ಪೋಯಿಲೇ ಪೊಯಿಲೆ"

........................................................

"ತಂಬುಟ್ಟ್ ಮುದ್ದೆಕ್ ತೇನಾಂಡು ಬಾಲ

ಏತ್‍ಕ್ ಪೊತ್‍ಕ್ ಪರೆಯಂತೆ ಬಾಲ

ಬಪ್ಪಕ ಪುತ್ತರಿ ಬಣ್ಣತೆ ಬಾತ್ 

ಪೋಪಕ ಪುತ್ತರಿ ಎಣ್ಣತೆ ಪೋಚಿ

ದಮ್ಮಯ್ಯ ಪುತ್ತರಿ ಒಮ್ಮಲೂ ಪೋತೆ”".

ಕನ್ನಡ ಅನುವಾದ

                 “ಹೇ ಮೇದ, ಡೊಲನ್ನು ಚೆನ್ನಾಗಿ ಬಾರಿಸು, ಹೇ ಕೊಂಬಿನವನೇ ಕೊಂಬನ್ನು ಚೆನ್ನಾಗಿ ಊದು. ಕೋಲನ್ನಿಡಿದು ಕುಣಿಯುವವರೇ ಸಮರಸವಾಗಿ ಕೋಲು ಹೊಡೆಯಿರಿ, ನಾವು ಗ್ರಾಮದ ಮೈದಾನದಲ್ಲಿ ಕುಣಿಯುತಿದ್ದೇವೆ. ವ್ಯವಸಾಯದ ಅಧಿದೇವತೆ ಇಗ್ಗುತಪ್ಪನ ಹಬ್ಬದಲ್ಲಿ ಕುಣಿಯುತ್ತಿದ್ದೇವೆ. ಮಹದೇವನ ಹೆಸರನ್ನು ಮನದಲ್ಲಿ ತಳೆದು ನರ್ತಿಸುತ್ತಿದ್ದೇವೆ, ವಾದ್ಯ ಹೃದಯಂಗಮವಾಗಿ ಬೋರ್ಗರೆಯುತ್ತಿದೆ. ಕುಣಿಯುವ ರಭಸಕ್ಕೆ ಆತನ ಕುಪ್ಪಸ ಗಾಳಿಯಲ್ಲಿ ಹಾರುತ್ತದೆ. ಕುಣಿತವ ರಭಸ ಕೋಲು ಹೊಡೆತದ ವೇಗದಲ್ಲಿ ಕೊಡಗಿನ ಫಲವತ್ತಾದ ನೆಲದಲ್ಲಿ ಬೆಳೆದ ಕೋಲು ಮುರಿಯಿತು. ಕುಣಿಯುವ ಯುವಕನ ನಡುಪಟ್ಟಿಯ ಸೊಬಗನ್ನು ನೋಡಿರಿ. 

                    ಈ ಉತ್ಸವದ ಆಹ್ವಾನಕ್ಕೆ ‘ಓ ಗೊಡದೆ ಹೋಗುವೆ ಏಕೆ? ನಿನ್ನ ಬಾಯಲ್ಲಿ ಹುತ್ತರಿ ತಂಬಿಟ್ಟು ತುಂಬಿದೆಯೇನು? ತಂಬಿಟ್ಟು ಹೆಚ್ಚು ರುಚಿಯಾಗಲು ಜೇನು ಸೇರಿಸಬೇಕು. ಯದ್ವಾತದ್ವ ಮಾತಾಡದಿರು ಬರುವಾಗ ಹುತ್ತರಿಯ ಬಹು ಸಡಗರದಿಂದ ಬಂದಿತು. ಹೋಗುವಾಗ ಯಾರಿಗೂ ಹೇಳದೆ ಹೋಗುತ್ತಿದೆ. ಆದರೆ ನಮ್ಮ ಮಮತೆಯ ಹುತ್ತರಿಯೇ? ! ಎಂದೂ ಕೂಡ ನಮ್ಮನ್ನು ಬಿಟ್ಟು ಹೋಗದಿರು. ಕೋಲಾಟದ ಸವಿಯನ್ನು ಕುರಿತು ಅದ್ಭುತವಾಗಿ ಜನಪದ ಕವಿಯು ಮೇಲಿನ ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾನೆ.” 

                    ಕೋಲಾಟ ಮುಗಿದ ನಂತರ ವಿಶಿಷ್ಟವಾದ ಒಂದು ಕುಣಿತವಿರುತ್ತದೆ. ಅದನ್ನು ‘ಪಡೆಕಳಿ ಅಥವಾ ಪರಿಯಕಳಿ ಎಂದು ಕರೆಯುತ್ತಾರೆ. ಈ ನೃತ್ಯವು ಯುದ್ಧವನ್ನು ನೆನಪಿಸುತ್ತದೆ. ಕೈಯಲ್ಲಿ ಗುರಾಣಿ ಮತ್ತು ಕೋಲು ಹಿಡಿದು ಪ್ರತಿಸ್ಪರ್ದಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ. “ನಾನ್ ಬಾಳ, ನೀನ್‍ಬಾಳ್, ಏಡ ಕೂಡ ಇಳಿಯುವ ಚಂಜೌದಿ ಬಾಳ್ ಇಗ್ಗ್‍ತಪ್ಪ ಬಾಳ್, ಬಯತೂರಪ್ಪ ಬಾಳ್, ಬಾಳ್ ಬಾಳ್‍ರೇಬಾಳ್”) ಎಂದು ಯುದ್ಧಕ್ಕೆ ಆಹ್ವಾನಿಸುತ್ತಾನೆ. ಯಾರಾದರು ಒಬ್ಬರು ಗೆಲ್ಲುವ ತನಕ ಇಬ್ಬರೂ ಹೊಡೆದಾಡುತ್ತಾರೆ. ನಂತರ ಆಟವನ್ನು ನಿಲ್ಲಿಸುತ್ತಾರೆ. 

                    ಪುತ್ತರಿ ಪೊಳ್ದ್ ದಿವಸ ದನಕರುಗಳಿಗೆಲ್ಲಾ ಶೃಂಗಾರ ಮಾಡುತ್ತಾರೆ. ಮನೆಗಲ್ಲಾ ತೋರಣ ಕಟ್ಟುತ್ತಾರೆ. ಆ ದಿನ ಹುತ್ತರಿಕುಕ್ಕೆ, ಹುತ್ತರಿಚಾಪೆ, ಹುತ್ತರಿಕುಡಿಕೆ, ಹುತ್ತರಿಕತ್ತಿಗಳು ಸಿದ್ಧವಾಗುತ್ತದೆ. ಹುತ್ತರಿ ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಒದಗಿಸಿಕೊಟ್ಟವರಿಗೆ ಅಕ್ಕಿ, ಬೆಲ್ಲ, ಬಾಳೆ, ಉಪ್ಪು ಮೆಣಸು, ತೆಂಗಿನೆಣ್ಣೆ, ಎಳ್ಳು, ತೆಂಗಿನಕಾಯಿ, ಹುತ್ತರಿಗೆಣಸು ಮುಂತಾದವನ್ನು ಕೊಡಬೇಕಾಗುತ್ತದೆ. ಊರಿನ ದೇವಸ್ಥಾನದ ಅರ್ಚಕರು ಮನೆಮನೆಗೆ ಹೋಗಿ ಪುಣ್ಯತೀರ್ಥವನ್ನು ಪ್ರೋಕ್ಷಿಸಬೇಕು. ಅರ್ಚಕನಿಗೂ ಯಥೋಚಿತ ಸತ್ಕಾರ ಮಾಡಬೇಕು. 

                    ನೆಲ್ಲಕ್ಕಿ ನಡುಬಾಡೆಯನ್ನು ಶುದ್ಧಗೊಳಿಸಿ ತೂಗುದೀಪದ ಕೆಳಗೆ ಚಾಪೆಯನ್ನು ಹಾಸಿ, ಅದರ ಮೇಲೆ ‘ಪುತ್ತರಿ ಪಚ್ಚಿ’ಯಲ್ಲಿ ಮಾವಿನ ಎಲೆ, ಅಶ್ವತ್ಥ ಎಲೆ ಇತ್ಯಾದಿಯನ್ನು ಹಾಕುತ್ತಾರೆ. ಪುತ್ತರಿ ಕುಕ್ಕೆಯ ತುಂಬ ಭತ್ತ ತುಂಬಿಸುತ್ತಾರೆ. ಅದರ ಮೇಲೆ ಒಂದು ಬಳ್ಳದಲ್ಲಿ ಬತ್ತ, ಅದರ ಮೇಲೆ ಅರ್ಧಸೇರಿನಲ್ಲಿ ಅಕ್ಕಿ ತುಂಬಿಸಿಡುತ್ತಾರೆ. ಪುತ್ತರಿ ಕುಡಿಕೆಯಲ್ಲಿ ತಂಬಿಟ್ಟು, ಹಾಲು, ಜೇನನ್ನು ಇಡುತ್ತಾರೆ. ನಂತರ ಕದಿರು ತೆಗೆಯುವ ಸಮಾರಂಭವಿರುತ್ತದೆ. ಒಬ್ಬ ವ್ಯಕ್ತಿಯು ಕದಿರನ್ನು ಕುಯ್ಯುವ ಕತ್ತಿಯನ್ನು ಹಿಡಿದು ನಿಂತಿರುತ್ತಾನೆ. ಕನ್ಯೆಯೊಬ್ಬಳು ‘ತಳಿಯಕ್ಕಿ ಬೊಳಕ’ನ್ನು ಹಿಡಿದು ನಿಂತಿರುತ್ತಾಳೆ. (ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ದೀಪ ಇಡುವುದು) ವಾದ್ಯ ಸಮೇತ ಗದ್ದೆಗೆ ತೆರಳಿ, ತಂದಿರುವ ಹಾಲು, ಜೇನನ್ನು ಕದಿರಿನ ಬುಡಕ್ಕೆ ಸುರಿದು, ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟುತ್ತಾರೆ. ನಂತರ ಒಂದು ಗುಂಡನ್ನು ಹಾರಿಸುತ್ತಾರೆ. ಎಲ್ಲರೂ ‘ಪೊಲಿ ಪೊಲಿ ದೇವ’ (ದೇವರೇ ಬೆಳೆಯು ಹೆಚ್ಚಲಿ) ಎಂದು ಹಾಡುತ್ತಾರೆ. 

                     ಕದಿರನ್ನು ತಂದು ಕೈಮಡ, ಸಮಾಧಿ, ಮನೆಯ ಬಾಗಿಲಿಗೆ ತೋರಣ ಕಟ್ಟುತ್ತಾರೆ. ಎಲ್ಲರೂ ಕದಿರನ್ನು ಮುಟ್ಟಿ ನಮಸ್ಕಾರ ಮಾಡಬೇಕು, ಗದ್ದೆಯಿಂದ ತಂದ ಹೊಸ ಅಕ್ಕಿಯ ಪಾಯಸವನ್ನು ತಯಾರಿಸಬೇಕಾಗುತ್ತದೆ. ಹೊಸ ಬೆಳೆ ಬಂದ ಸಂತೋಷದಲ್ಲಿ ಊರವರೆಲ್ಲಾ ಕೂಡಿ ಕೋಲಾಟ ನಡೆಸುವರು. ಹೆಂಗಸರು, ಗಂಡಸರು ಎಲ್ಲಾ ಜಾತಿಯವರು ‘ಕೋಲಾಟ’ ಅಥವಾ ‘ಪರಿಯಕಳಿ’ಯನ್ನು ನಡೆಸುತ್ತಾರೆ. ಮನೆ ಮನೆಗೆ ಹೋಗಿ ಹಾಡನ್ನು ಹಾಡಿ ಅವರಿಂದ ಕಾಣಿಕೆ ಪಡೆಯುವ ಪದ್ಧತಿ ಇದೆ. ಸಂಗ್ರಹವಾದ ಹಣದಿಂದ ‘ಊರೊರ್ಮೆ’ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಮದುಮಕ್ಕಳು ಅಥವಾ ನೆಂಟರನ್ನು ಹೊಗಳಿ ಹಾಡುವುದು ಈ ಹಬ್ಬದ ವಿಶೇಷಗಳಲ್ಲೊಂದು. ಈ ಕುರಿತು ಬರುವ ಹಾಡು ಇಂತಿದೆ. 

“ಹುತ್ತರಿ ಹಾಡು ಬಾಳೋ ಬಾಳೊ ಚಂಜ್ಞಾದಿ ಪುತ್ತರಿರ ಜೊಲ್ಲಾಲೆನಾಲ್ ಮೂಂದ್ ಪಾಡನ ಅಲ್ಲಿತೊಂದ್ ಅಲ್ಲಲ್ಲಿ”

                     ಹುತ್ತರಿ ಹೇಗೆ ಆರಂಭವಾಯಿತೆಂದು ಇಲ್ಲಿ ವಿವರಿಸಲಾಗಿದೆ. ಬೆಳೆ ಹುಲುಸಾಗಿ ಬಂದು ಕದಿರು ಬಿಟ್ಟು ಕದಿರು ಹಣ್ಣಾಗತೊಡಗಿತು. ಆದ್ದರಿಂದ ಬೆಳೆದ ಬತ್ತವನ್ನು ಸಾಂಪ್ರದಾಯಿಕವಾಗಿ ಮನೆಗೆ ತರುವ ಸುಮುಹೂರ್ತ ನಿಶ್ಚಯಿಸಲು ಎಲ್ಲರೂ ಸಭೆ ಸೇರಿದರು. ಕೊಡಗಿನವರೆಲ್ಲರ ಪರವಾಗಿ ಇಗ್ಗುತಪ್ಪ ದೇವರು ಮಲಬಾರಿಗೆ ಹೋಗಿ ತನ್ನ ಅಣ್ಣ ಬೇಂದ್ರು ಕೋಲಪ್ಪನನ್ನು ಕಂಡು ಈ ವಿಚಾರ ಪ್ರಸ್ತಾಪಿಸಿದನು. ಬೇಂದ್ರು ಕೋಲಪ್ಪನು ಕೇರಳದಲ್ಲಿ ಪ್ರಚಲಿತವಿರುವ ಓಣಂ ರೀತಿಯಲ್ಲಿ ಕೊಡಗಿನಲ್ಲೂ ತಕ್ಕ ಉತ್ಸವದ ಏರ್ಪಾಡು ಮಾಡುವುದೆಂದು ಹೇಳಿ ತನ್ನ ಆಶೀರ್ವಾದದ ಸಂಕೇತವಾಗಿ  ಬೆಳೆ ಕೊಯ್ಯುವ ಕುಡುಗೋಲು ಇತ್ಯಾದಿಗಳನ್ನು ಕೊಟ್ಟನು. ಇಗ್ಗುತಪ್ಪನು ಅಮ್ಮಂಗೇರಿಯಲ್ಲಿರುವ ತನ್ನ ದೇವಸ್ಥಾನಕ್ಕೆ ಬಂದು ಈ ಕತ್ತಿಯನ್ನು ಅಲ್ಲಿಟ್ಟನು. 

                    ನವೆಂಬರ್ ತಿಂಗಳಿನಲ್ಲಿ ಕೊಡಗಿನವರು ಪ್ರತಿಕುಟುಂಬಕ್ಕೆ ಒಬ್ಬರಂತೆ ನೈವೇದ್ಯಕ್ಕೆ ಅಕ್ಕಿ ಹಾಲು ಸಮೇತ ಇಗ್ಗುತಪ್ಪ ದೇವಸ್ಥಾನದಲ್ಲಿ ಸೇರಿದರು. ದೇವಸ್ಥಾನದ ಅರ್ಚಕರು ಶುದ್ಧ ಕಲಶ ಮಾಡಿ ದೇವಸ್ಥಾನದ ಬಾಗಿಲು ತೆರೆದಾಗ ದೇವಸ್ಥಾನದೊಳಗಿನ ಕುಡುಗೋಲು ಇತ್ಯಾದಿಯನ್ನು ಓಣಂ ತಾಯಿಯನ್ನು ಕಂಡು ಜನರಿಗೆ ವಿಶೇಷವನ್ನು ತಿಳಿಸಿದನು. ದೇವತಕ್ಕರುಗಳ ಮುಖ್ಯಸ್ಥನಾದ ಪರದಂಡತಕ್ಕನನ್ನು, ಜ್ಯೋತಿಷಿಯನ್ನು ಕರೆಸಿ ಇಗ್ಗುತಪ್ಪ ದೇವರ ಕೃಪೆಯಿಂದ ಓಣಂ ತಾಯಿ ತಮ್ಮನ್ನು ಹರಸಿರುವುದರಿಂದ ಕೊಡಗಿನಲ್ಲಿ ಹೊಸ ಬತ್ತವನ್ನು ಕುಯ್ಯಲು ಶುಭದಿನ ನಿಶ್ಚಯಿಸಬೇಕೆಂದು ಕೇಳಿಕೊಂಡ ನಂತರ ದಿನ ನಿಶ್ಚಯಿಸಲಾಯಿತು. ಹೀಗೆ ಹಬ್ಬದ ವೈಶಿಷ್ಟ್ಯತೆಯನ್ನು ಈ ಕಥೆ ಕಣ್ಣಿಗೆ ಕಟ್ಟುವಂತೆ ಹೇಳಿದೆ.

                    ಸಂಪತ್ತಿನ ದೇವಿ ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಂಡು ಆರಾಧಿಸುವ ಹುತ್ತರಿ ಹಬ್ಬದ ಊಟ ವಿಶೇಷತೆಯಿಂದ ಕೂಡಿರುತ್ತದೆ. ಏಲಕ್ಕಿ ಹಿಟ್ಟು, ತಂಬಿಟ್ಟು, ತಿಂಡಿಗಳನ್ನು ತಯಾರಿಸಿ ನೆಲ್ಲಕ್ಕಿ ನಡುಬಾಡೆಯಲ್ಲಿ ಗೋಡೆಗೆ ಪತ್ತಾಯ, ಮನೆಬಾಗಿಲು ದನದ ಕೊಟ್ಟಿಗೆ ಇಲ್ಲೆಲ್ಲಾ ಚಿತ್ರ ಬೀಳುವಂತೆ ಕೈಯನ್ನು ಒತ್ತುವುದಕ್ಕೆ ‘ಹುತ್ತರಿಕೈಕುರಿ’ ಎನ್ನುತ್ತಾರೆ.

                      ಕೆಲವು ಕಡೆಗಳಲ್ಲಿ ಮನೆಗೆ ಹೊಸ ಕದಿರು ಬಂದ ಸಂತೋಷಕ್ಕೆ ಮನೆಯ ಮುಂದೆ ಅಂಗಳದಲ್ಲಿ ಒಂದು ತೆಂಗಿನ ಕಾಯಿಯನ್ನು ಇಟ್ಟು ಅದಕ್ಕೆ ಗುರಿ ಇಟ್ಟು ಗುಂಡು ಹಾರಿಸುವ ಪದ್ಧತಿ ಇದೆ. ಹುತ್ತರಿ ಕದಿರು ಮುಹೂರ್ತದ ರಾತ್ರಿ ಪ್ರತಿಯೊಬ್ಬರೂ ‘ಏಲಕ್ಕಿ ಹಿಟ್ಟು’ ಹುತ್ತರಿ ಪಾಯಸವನ್ನು ಊಟ ಮಾಡುವುದು ಕೊಡವರ ಸಂಪ್ರದಾಯವಾಗಿದೆ. ಏಲಕ್ಕಿ ಹಿಟ್ಟಲ್ಲಿರುವ ಶಾಸ್ತ್ರದ ಕಲ್ಲುಚೂರು ಯಾರಿಗೆ ಸಿಗುವುದೋ ಅವರಿಗೆ ‘ಕಲ್ಲಾಯುಷ್ಯ’ವಿದೆ ಎಂದು ನಂಬುತ್ತಾರೆ. ಇಲ್ಲಿಯೂ ಕೋಲಾಟ, ಮಹಿಳೆಯರ ಉಮ್ಮತ್ತಾಟ್ ಮುಂತಾದ ಮನೋರಂಜನೆ ಇರುತ್ತದೆ. ಈ ಎಲ್ಲಾ ಆಟಗಳು ಕೊಡವರ ಪರಸ್ಪರ ಪ್ರೀತಿ ಒಗ್ಗಟ್ಟುಗಳ ಬಾಂಧವ್ಯದ ಸಂವರ್ಧನೆಗಾಗಿ ಕಂಡುಬರುತ್ತದೆ. ಕೊಡವರು ಹಬ್ಬ, ಆಚಾರ-ವಿಚಾರ, ಪದ್ಧತಿ ಪರಂಪರೆಗಳನ್ನು ಉಳಿಸಿಕೊಂಡು ಬಂದಿರುವುದು ಅವರು ಸಂಸ್ಕøತಿ ಸಂಸ್ಕಾರ ಸಂಪನ್ನರು ಎಂಬುದಕ್ಕೆ ಸಾಕ್ಷಿಯಾಗಿದೆ.  ಲೇಖಕರು : ಡಾ. ಕಾವೇರಿ ಪ್ರಕಾಶ್ (ಸಂಗ್ರಹ : ಕೊಡವರ ಸಂಸ್ಕಾರಗಳು)